ಡೆಹ್ರಾಡೂನ್: ಉತ್ತರಾಖಂಡದ ಹರಿದ್ವಾರದಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ಆರು ಮಂದಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿ, ವೇದ ಮಂತ್ರಗಳ ಘೋಷದ ನಡುವೆ ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಚಂಡಿಘಾಟ್ನಲ್ಲಿ ಗಂಗಾ ಪೂಜೆ, ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅವರು ಧರ್ಮವನ್ನು ಸ್ವೀಕರಿಸಿದರು.
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಮಹಿದ್ ಮತ್ತು ಅವರ ಪತ್ನಿ ಸಬೀನಾ ಬಿಬಿ ಇದೀಗ ಕ್ರಮವಾಗಿ ಮೋಹಿತ್ ಮತ್ತು ಖುಷಿ ಎಂಬ ಹೆಸರುಗಳನ್ನು ಸ್ವೀಕರಿಸಿದ್ದಾರೆ. ತಮ್ಮ ನಿರ್ಧಾರವನ್ನು ಸ್ವಇಚ್ಛೆಯಿಂದ ತೆಗೆದುಕೊಂಡಿರುವುದಾಗಿ ಮೋಹಿತ್ ಹೇಳಿದ್ದಾರೆ. ಸನಾತನ ಧರ್ಮದ ಬಗ್ಗೆ ಗೌರವ, ಕರುಣೆ ಮತ್ತು ಶಾಂತಿಯ ಭಾವನೆ ಮೂಡಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಧರ್ಮ ಸ್ವೀಕಾರದ ಬಳಿಕ ಮಕ್ಕಳ ಹೆಸರುಗಳನ್ನೂ ಬದಲಾಯಿಸಲಾಗಿದೆ. ಇಬ್ಬರು ಗಂಡು ಮಕ್ಕಳಿಗೆ ರೋಷನ್ ಮತ್ತು ರೋಹನ್ ಹಾಗೂ ಪುತ್ರಿಗೆ ಅನನ್ಯಾ ಎಂದು ಹೆಸರಿಡಲಾಗಿದೆ. ಇದೇ ವೇಳೆ ಸಹರಾನ್ಪುರದ ಇಬ್ರಾಹಿಂ ಅವರು ಕೂಡ ಸನಾತನ ಧರ್ಮವನ್ನು ಸ್ವೀಕರಿಸಿ ವಿರಾಟ್ ಪುಂಡೀರ್ ಎಂಬ ಹೊಸ ಹೆಸರನ್ನು ಪಡೆದಿದ್ದಾರೆ.