Search


ಮೊಬೈಲ್ ಇದೆ ಅಂತ ಹೇಗೆ ಬೇಕಾದರೂ ಕಾಮೆಂಟ್ ಮಾಡಬಹುದಾ? ಕೇಸ್ ವಾಪಸ್ ಇಲ್ಲ ಎಂದ ನಟಿ ರಮ್ಯಾ

ಬೆಂಗಳೂರು: ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕುಟುಂಬಸ್ಥರು ಪ್ರಕರಣವನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಪ್ರಕರಣವನ್ನು ಹಿಂಪಡೆಯುವುದಿಲ್ಲ ಎಂದು ನಟಿ ರಮ್ಯಾ ಖಡಕ್‌ವಾಗಿ ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಕುಟುಂಬಸ್ಥರು ರಮ್ಯಾ ಅವರಲ್ಲಿ ಕ್ಷಮೆಯಾಚಿಸಿ, ಈ ಬಾರಿ ತಪ್ಪಾಗಿದೆ ಎಂದು ಪರಿಗಣಿಸಿ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, “ಇದು ಎಲ್ಲರಿಗೂ ಒಂದು ಪಾಠವಾಗಬೇಕು. ಯಾವುದೇ ಕಾರಣಕ್ಕೂ ನಾನು ಪ್ರಕರಣವನ್ನು ವಾಪಸ್ ಪಡೆಯುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಬಳಸಿಕೊಂಡು ಯಾರ ಬಗ್ಗೆಯಾದರೂ ಮನಬಂದಂತೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ರಮ್ಯಾ ಹೇಳಿದ್ದಾರೆ. ವಿಶೇಷವಾಗಿ ಒಬ್ಬ ಮಹಿಳೆಯ ಬಗ್ಗೆ ಅವಹೇಳನಕಾರಿ ಅಥವಾ ಅಶ್ಲೀಲವಾಗಿ ಕಾಮೆಂಟ್ ಮಾಡುವ ಮುನ್ನ ಸಾವಿರ ಬಾರಿ ಯೋಚಿಸುವಂತಾಗಬೇಕು. ಈ ಪ್ರಕರಣ ಸಮಾಜಕ್ಕೆ ಒಂದು ಎಚ್ಚರಿಕೆ ಹಾಗೂ ಪಾಠವಾಗಬೇಕು ಎಂಬುದು ಅವರ ನಿಲುವಾಗಿದೆ.

ಅಲ್ಲದೆ, ಪ್ರಕರಣದಲ್ಲಿ ಎಷ್ಟು ಬಾರಿ ಸಾಕ್ಷ್ಯ ನೀಡಲು ಕರೆದರೂ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡಲು ಸಿದ್ಧವಿದ್ದೇನೆ. ಆದರೆ ಆರೋಪಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ 6ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.

By Ravikumar - 06-09-2026


Ads in Post