ಧರ್ಮಸ್ಥಳ: ಸ್ವಪಕ್ಷೀಯರ ಅಡ್ಡ ಮತದಾನದ ಬಗ್ಗೆ ದೆಹಲಿಗೆ ತೆರಳಿ ಸ್ಪಷ್ಟನೆ ನೀಡಿ ವಾಪಸಾಗಿರುವ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಮಂಜುನಾಥನ ದರ್ಶನ ಪಡೆದಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ವಿಜಯೇಂದ್ರ "ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ವ್ಯವಹಾರ ಇಲ್ಲ, ಒಬ್ಬ ರಾಜಕಾರಣಿಗೆ ನೀಡಬೇಕಾದ ಮರ್ಯಾದೆಯನ್ನ ನಾನು ಡಿಕೆಗೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲೇ ಮೊಕ್ಕಾಂ ಹೂಡಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದ ಅವರು, ನಿನ್ನೆ ರಾತ್ರಿ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಆಗಮಿಸಿ, ಇಂದು ಮುಂಜಾನೆ ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವಿರೋಧಿಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಡಿಕೆಗೂ ನನಗೂ ಯಾವುದೇ ವೈಯಕ್ತಿಕ ವ್ಯವಹಾರವಿಲ್ಲ..!
ಇನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದಿಂದ ವಿಜಯೇಂದ್ರ ಮೇಲೆ ಹೊರಿಸಲಾಗಿರುವ ಆರೋಪಗಳ ಬಗ್ಗೆ ಮಾತನಾಡಿದ ಅವರು " ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬೆನ್ನಲ್ಲೇ ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರಿಸಿದ ಅವರು, ಅಡ್ಡ ಮತದಾನ ನಡೆದಾಗ ಅದಕ್ಕೆ ನಾನೇ ಕಾರಣ ಎಂಬ ಚರ್ಚೆಗಳನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದ ಬಿಜೆಪಿ ಅಧ್ಯಕ್ಷರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಜೊತೆಯಾಗಿದ್ದಾರೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ.
ಆದರೆ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ನನ್ನ ಮಧ್ಯೆ ಯಾವುದೇ ವ್ಯವಹಾರವಿಲ್ಲ. ನನ್ನ ವಿರುದ್ಧ ಯಾರು ಅಪಪ್ರಚಾರ ಮಾಡುತ್ತಿದ್ದಾರೋ, ಅವರಿಗೆ ಆ ಭಗವಂತನೇ ಒಳ್ಳೆಯ ಬುದ್ಧಿ ಕೊಡಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿರುಗೇಟು ನೀಡಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದರೂ, ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ನನಗೆ ಹಾಗೂ ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದೆ. ಈ ಅಡ್ಡಮತದಾನವು ರಾಜ್ಯ ರಾಜಕಾರಣದಲ್ಲಿ ಬೇರೆ ಬೇರೆ ರೀತಿಯ ಚರ್ಚೆಗಳನ್ನು ಹುಟ್ಟುಹಾಕಿತು. ಫಲಿತಾಂಶದ ಮಾರನೇ ದಿನ ನನ್ನ ಮನಸ್ಸಿಗೆ ತೀವ್ರ ನೋವಾಗಿದ್ದರಿಂದ, ಶಾಸಕಾಂಗ ಪಕ್ಷದ ಸಭೆಯನ್ನು ಧರ್ಮಸ್ಥಳದಲ್ಲೇ ನಡೆಸಿ, ಶಾಸಕರು ಆಣೆ-ಪ್ರಮಾಣ ಮಾಡಬೇಕೆಂದು ಹೇಳಿದ್ದು ನಿಜ. ನಾನು ಕೂಡ ಭಾವನಾತ್ಮಕವಾಗಿ ಯೋಚಿಸುವ ಸಾಮಾನ್ಯ ಮನುಷ್ಯ. ಆದರೆ, ಪಕ್ಷದ ಹಿರಿಯರು ಕಿವಿಮಾತು ಹೇಳಿದಂತೆ, ಎಲ್ಲರ ಮಾತಿಗೆ ಗೌರವ ಕೊಟ್ಟು ಇಂದು ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ ಎಂದರು.