ಮಾಧ್ಯಮಗಳ ಬಗ್ಗೆ ಸಮಾಜದಲ್ಲಿ ಆಕ್ರೋಶ ಇರುವುದು ಸತ್ಯ. ಈ ಆಕ್ರೋಶ ಸಹಜವೂ ಆಗಿದೆ.
ಆದರೆ ಮಾರಿಕೊಂಡ ಮಾಧ್ಯಮಗಳು ಎಂದು ಸಾರಾಸಗಟಾಗಿ ಆರೋಪಿಸುವಾಗ ಸ್ವಲ್ಪ ಯೋಚನೆ ಮಾಡ ಬೇಕಾಗುತ್ತದೆ.
'ಮಾರಿಕೊಂಡ ಮಾಧ್ಯಮಗಳು' ಅಂದಾಗ ಆಕ್ರೋಶ ಭರಿತರಾದ ಪತ್ರಕರ್ತರು, ಬಹುಷ: 'ಮಾರಿಕೊಂಡ ಮಾಧ್ಯಮ ಸಂಸ್ಥೆಗಳು' ಎಂದು ಹೇಳಿದ್ದರೆ ಅಷ್ಟೊಂದು ಸಿಟ್ಟಾಗುತ್ತಿರಲಿಲ್ಲವೇನೋ? ಮತ್ತು ಈ ಆರೋಪ ಸತ್ಯಕ್ಕೆ ಹೆಚ್ಚು ಹತ್ತಿರವಾಗುತ್ತಿತ್ತೋ ಏನೋ?
ಮಾರಿಕೊಂಡ ಪತ್ರಕರ್ತರು ಖಂಡಿತ ಇದ್ದಾರೆ. ಇವರು ಹೆಚ್ಚು ಸದ್ದು ಮಾಡುತ್ತಿರುವ ಕಾರಣ ಸಾರಾಸಗಟಾಗಿ ಪತ್ರಕರ್ತರೆಲ್ಲರೂ ಮಾರಾಟವಾಗಿದ್ದಾರೆ ಎಂಬ ಅಭಿಪ್ರಾಯ ಸಮಾಜದಲ್ಲಿದೆ. ಅದರೆ ನಮ್ಮ ಪತ್ರಕರ್ತರಲ್ಲಿ ಮಾರಿಕೊಂಡವರಿಗಿಂತ ಮಾರಿಕೊಳ್ಳದವರ ಸಂಖ್ಯೆ ಹೆಚ್ಚು ಎನ್ನುವುದನ್ನು ಯಾವುದೇ ತನಿಖೆಯ ನೆರವಿಲ್ಲದೆ ವಿಶ್ವಾಸಪೂರ್ವಕವಾಗಿ ಹೇಳಬಹುದು. ಮಾರಿಕೊಳ್ಳದ ಪತ್ರಕರ್ತರಲ್ಲಿ ಎರಡು ಗುಂಪುಗಳಿವೆ. ಮಾರಿಕೊಳ್ಳಲೇಬಾರದೆಂದು ನಿರ್ಧಾರ ಮಾಡಿ ಪ್ರಾಮಾಣಿಕರಾಗಿ ಉಳಿದವರದ್ದು ಒಂದು ಗುಂಪು. ಮಾರಿಕೊಳ್ಳಲು ಅವಕಾಶ ಇಲ್ಲದೆ ಪ್ರಾಮಾಣಿಕರಾಗಿ ಉಳಿದವರದ್ದು ಇನ್ನೊಂದು ಗುಂಪು. ಅದೇನೇ ಇದ್ದರೂ ಮಾರಿಕೊಳ್ಳದವರ ಗುಂಪೇ ದೊಡ್ದದು.
ಪತ್ರಿಕೆ ಇಲ್ಲವೇ ಚಾನೆಲ್ ಗಳ ಒಟ್ಟು ಉದ್ಯೋಗಿಗಳಲ್ಲಿ ಮುಕ್ಕಾಲುಪಾಲು ಕಚೇರಿಯೊಳಗೆ ಕೆಲಸ ಮಾಡುವವರು, ಇವರಿಗೆ ಹೊರಗಿನ ಸಂಪರ್ಕವೇ ಇಲ್ಲವಾದ ಕಾರಣ ಅವರನ್ನು ಮೂಸುವವರೂ ಇರುವುದಿಲ್ಲ. ಆದ್ದರಿಂದ ಅವರಿಗೆ ಮಾರಿಕೊಳ್ಳಲು ಅವಕಾಶವೇ ಇಲ್ಲ.ಹೆಚ್ಚೆಂದರೆ ಸುದ್ದಿ ಸಂಪಾದಕರು ಇಲ್ಲವೇ ಇನ್ ಪುಟ್ ಎಡಿಟರ್ಗಳಿಗೆ ಸ್ವಲ್ಪ ಡಿಮಾಂಡ್ ಇರಬಹುದು.
ಯಾರೋ ನಾಲ್ಕು ಸಂಪಾದಕರು ಮತ್ತು ಸೆಲೆಬ್ರಿಟಿ ಆ್ಯಂಕರ್ ಗಳು ಪ್ರದರ್ಶಿಸುವ ಲೈಫ್ ಸ್ಟೈಲ್ ನೋಡಿ ಪತ್ರಕರ್ತರೆಲ್ಲರೂ ಆ ರೇಂಜ್ನಲ್ಲಿದ್ದಾರೆ, ತಿಂಗಳಿಗೊಮ್ಮೆ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ, ಬಿಎಂಡಬ್ಲ್ಯುನಲ್ಲಿ ಓಡಾಡುತ್ತಾರೆ ಎಂದು ಹೇಳುವುದು ಮೂರ್ಖತನವಾಗುತ್ತದೆ. ಪ್ರಕಾಶ್ ರಾಜ್ ಅವರಂತಹ ಸ್ಟಾರ್ ಗಳು ಕೂಡಾ ಇಂತಹವರ ಸೆಲೆಬ್ರೆಟಿ ಪತ್ರಕರ್ತರ ಜೊತೆ ಚೆನ್ನಾಗಿಯೇ ಇರುತ್ತಾರೆ. ಮೋಜು-ಮೇಜವಾನಿಗಳು ನಡೆಯುತ್ತಿರುತ್ತವೆ. ಆ ರೇಂಜ್ ನಲ್ಲಿ ಪತ್ರಕರ್ತರೆಲ್ಲರೂ ಇರುವುದಿಲ್ಲ. ಇಂದಿಗೂ ಮುಖ್ಯವಾಹಿನಿ ಮಾಧ್ಯಮಗಳಲ್ಲಿರುವ (ಮಾರಿಕೊಳ್ಳದ) ಪತ್ರಕರ್ತರಲ್ಲಿ ಬಹಳಷ್ಟು ಮಂದಿಗೆ ಸ್ವಂತ ಮನೆಗಳಿಲ್ಲ, ಕಾರುಗಳನ್ನು ಇಟ್ಟುಕೊಂಡವರು ಬೆರಳೆಣಿಕೆಯಲ್ಲಿರಬಹುದು.
ಅವರಿಗೇನು ಆಕರ್ಷಕ ಸಂಬಳಗಳೂ ಇಲ್ಲ,. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪತ್ರಕರ್ತನಾದವನ ಸಂಬಳಕ್ಕೂ ಅದೇ ಪದವಿಯಿಂದ ಕಾಲೇಜು ಮೇಸ್ಟ್ರಾದವನ ಸಂಬಳಕ್ಕೂ ತಾಳೆಯೇ ಇಲ್ಲ. ಇನ್ನು ಕನ್ನಡದ ಪತ್ರಕರ್ತರ ಸ್ಥಿತಿ ಚಿಂತಾಜನಕ. ಮೈಕ್ ಹಿಡಿದುಕೊಂಡು ಓಡಾಡುತ್ತಿರುವ ಟಿವಿ ರಿಪೋರ್ಟರ್ ಗಳನ್ನು ಪಕ್ಕಕ್ಕೆ ಕರೆದು ಅವರ ಸಂಬಳ ಎಷ್ಟು? ವರ್ಕಿಂಗ್ ಅವರ್ ಎಷ್ಟು? ಎಂದು ಮೆತ್ತಗೆ ಕೇಳಿ ನೋಡಿ.
ನಮ್ಮಲ್ಲಿ ಬಹಳಷ್ಟು ಓದುಗರು ಮತ್ತು ವೀಕ್ಷಕರಿಗೆ ಮಾಧ್ಯಮೋದ್ಯಮದ ಆರ್ಥಿಕತೆ ಅರ್ಥವಾಗುವುದಿಲ್ಲ. ಪತ್ರಿಕೆಗಳ ಉತ್ಪಾದನಾ ವೆಚ್ಚಕ್ಕೂ ಅದರ ಮುಖ ಬೆಲೆಗೂ ಸಂಬಂಧವೇ ಇಲ್ಲ. ಅದೇ ರೀತಿ ಚಾನೆಲ್ಗಳ ಮಾಲೀಕರಿಗೂ ವೀಕ್ಷಕರು ಕೇಬಲ್ನವರಿಗೆ ಕೊಡುವ ಶುಲ್ಕಕ್ಕೂ ಸಂಬಂಧವೇ ಇಲ್ಲ. ಪತ್ರಿಕೆ,ಪುಸ್ತಕ ಕೊಳ್ಳುವ ವಿಚಾರದಲ್ಲಿ ನಾವೆಲ್ಲರೂ ಜಿಪುಣರೇ. ಕಳೆದೆರಡು ದಶಕಗಳಲ್ಲಿ ಮದ್ಯ ಮತ್ತು ಸಿಗರೇಟ್ ಬೆಲೆ ಯರ್ರಾಬಿರ್ರಿ ಏರಿದ್ದರೂ ಅದರ ಉತ್ಪಾದನೆ ಕಡಿಮೆ ಆಗಿಲ್ಲ, ಹೆಚ್ಚಾಗಿದೆ. ಪತ್ರಿಕೆಗಳ ಸರ್ಕ್ಯುಲೇಷನ್, ನ್ಯೂಸ್ ಚಾನೆಲ್ ಗಳ ರೀಚ್ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಾಗಿಲ್ಲ.
ಇಂದಿನ ಯಾವ ಮಾಧ್ಯಮಗಳು ಕೂಡಾ ಕೋಟ್ಯಂತರ ರೂಪಾಯಿ ಲಾಭ ಗಳಿಸುವ ಮಟ್ಟದಲ್ಲಿ ಇಲ್ಲ. ಜಾಹೀರಾತುದಾರರ ಮೊದಲ ಆದ್ಯತೆ ಮನರಂಜನಾ ಚಾನೆಲ್ ಗಳು, ಮಾಧ್ಯಮ ಸಂಬಂಧಿ ಚಾನೆಲ್ ಗಳಿಗೆ ಜಾಹೀರಾತಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಿದ್ದರೂ ಮಾಧ್ಯಮಗಳು ಹೇಗೆ ಉಳಿದಿವೆ ಎನ್ನುವ ಪ್ರಶ್ನೆಗೆ ಉತ್ತರ ಬೇಕಿದ್ದರೆ ಮಾಧ್ಯಮ ಸಂಸ್ಥೆಗಳ ಮಾಲೀಕರ ಹಿನ್ನೆಲೆಯನ್ನೊಮ್ಮೆ ಪರಿಶೀಲಿಸಿ.
ನಮ್ಮ ಇಂದಿನ ಬಹಳಷ್ಟು ಮಾಧ್ಯಮಗಳ ಮಾಲೀಕತ್ವ ಒಂದೋ ರಾಜಕಾರಣಿಗಳು ಕೈಯಲ್ಲಿದೆ ಇಲ್ಲವೇ ರಾಜಕೀಯ ಪಕ್ಷಗಳ ಹಿತೈಷಿಯಾಗಿರುವ ಉದ್ಯಮಿಗಳ ಕೈಯಲ್ಲಿ ಇದೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ಈ ಉದ್ಯಮಿಗಳು ಮಾಧ್ಯಮ ಸಂಸ್ಥೇಗಳಿಗೆ ಹಾಕುವ ಬಂಡವಾಳ ನೆಲಗಡಲೆ ಬೀಜ. ಅವರಿಗೆ ಮಾಧ್ಯಮಗಳು ತಮ್ಮ ಉದ್ಯಮ ಸಾಮ್ರಾಜ್ಯಕ್ಕೆ ರಕ್ಷಣೆಯ ಕೋಟೆ ಅಷ್ಟೆ.
ಈ ಸ್ಥಿತಿಯಲ್ಲಿ ಮಾಧ್ಯಮಸಂಸ್ಥೆಗಳು ಒಂದೋ ತಮ್ಮನ್ನು ಮಾರಿಕೊಳ್ಳಬೇಕು ಇಲ್ಲವೇ ಮುಚ್ಚಬೇಕು ಎನ್ನುವ ಸ್ಥಿತಿಯಲ್ಲಿವೆ. ಎಲ್ಲರೂ ಸ್ವಯೀಚ್ಚೆಯಿಂದ ಮಾರಿಕೊಳ್ಳುತ್ತಾರೆ ಎಂದು ಹೇಳಲಾಗುವುದಿಲ್ಲ. ಒತ್ತಡ ಇದೆ. ಪ್ರಣಯ್ ರಾಯ್ ತಾವೇ ಕಟ್ಟಿ ಬೆಳೆಸಿದ ಎನ್ ಡಿಟಿವಿಯನ್ನು ಸ್ವಯೀಚ್ಚೆಯಿಂದ ಅದಾನಿಗೆ ಮಾರಾಟ ಮಾಡಿದ್ರಾ? ಸಿಎನ್ ಎನ್ ಚಾನೆಲನ್ನು ಅಂಬಾನಿಗಳು ಹೇಗೆ ಖರೀದಿಸಿದರು? ಈಟಿವಿ ಯಾರಿಗೆ ಮಾರಾಟವಾಯಿತು? ಸಮಸ್ಯೆ ಗಂಭೀರವಾಗಿದೆ, ಅದರ ಆಳ-ಅಗಲಗಳನ್ನು ತಿಳಿದುಕೊಳ್ಳದೆ ಬೀಸು ಹೇಳಿಕೆ ನೀಡಿದರೆ ಒಂದಿಷ್ಟು ಪ್ರಚಾರ ಸಿಗಬಹುದು ಅಷ್ಟೆ.
ಮಾರಿಕೊಂಡ ಪತ್ರಕರ್ತರೇ ಯಾಕೆ, ಮಾರಿಕೊಂಡ ಕಲಾವಿದರು ಇಲ್ಲವೇ? ಪತ್ರಕರ್ತರನ್ನು ಮಾರಿಕೊಂಡವರೆಂದು ಕಿಚಾಯಿಸುವ ಪ್ರಕಾಶ್ ರಾಜ್ ಅವರಂತಹ ಸಿನೆಮಾ ನಟರು ಮಾರಿಕೊಂಡ ಚಿತ್ರನಟ-ನಟಿಯರು ನಿರ್ದೇಶಕರ ಬಗ್ಗೆಯೂ ಧೈರ್ಯದಿಂದ ಮಾತನಾಡಬೇಕಲ್ಲವೇ!
- ದಿನೇಶ್ ಅಮ್ಮಿನ್ಮಟ್ಟ