Search


ಟೆಲಿಪ್ರಾಪ್ಟರ್ ಇಲ್ಲದೆ BJP ನಾಯಕರು ಪೂರ್ಣ ವಂದೇ ಮಾತರಂ ಹಾಡಿದರೆ ರಾಜೀನಾಮೆ ಕೊಡ್ತೀನಿ; ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕದ ಗೃಹ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ನಾಯಕರು ವಂದೇ ಮಾತರಂನ ಎಲ್ಲಾ ಚರಣಗಳನ್ನು ಹಾಡಬೇಕು ಎಂದು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುವ ಪದ್ಧತಿಯನ್ನು ಹಿಂದಿನ ನಾಯಕರು ನಿರ್ಧರಿಸಿದ್ದರು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. “ಈಗ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಚರಣಗಳನ್ನು ಹಾಡಲು ಬಯಸುತ್ತಿದ್ದಾರೆ. ಹಾಗಾದರೆ ಅವರು ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರಿಗಿಂತ ಶ್ರೇಷ್ಠರೇ?” ಎಂದು ಅವರು ಪ್ರಶ್ನಿಸಿದ್ದಾರೆ.

ವಂದೇ ಮಾತರಂನ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಜನವರಿಯಲ್ಲಿ ಅದರ ಎಲ್ಲಾ ಆರು ಚರಣಗಳನ್ನು ಹಾಡುವಂತೆ ನಿರ್ದೇಶನ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್ 19ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ 1937ರಲ್ಲಿ ವಂದೇ ಮಾತರಂ ಕುರಿತು ಕೈಗೊಂಡ ನಿರ್ಣಯಕ್ಕೆ ಬದ್ಧವಾಗಿರಲು ನಿರ್ಧರಿಸಲಾಯಿತು. ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಪದ್ಧತಿಯನ್ನು ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹೈಕೋರ್ಟ್ ಗೆ PIL ಸಲ್ಲಿಕೆ!

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ಬಿಜೆಪಿ ಟೀಕಿಸಿದ್ದು, ಇದನ್ನು “ತುಷ್ಟೀಕರಣದ ರಾಜಕಾರಣ” ಎಂದು ಆರೋಪಿಸಿದೆ. ಇದೇ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ನೀಡಿರುವ ಆದೇಶವನ್ನು ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ, ಕೇಂದ್ರ ಗೃಹ ಸಚಿವಾಲಯವು ಜುಲೈ 9, 2026ರಂದು ವಂದೇ ಮಾತರಂಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಿ, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ ಎಂದು ಉಲ್ಲೇಖಿಸಲಾಗಿದೆ. ಕೇಂದ್ರದ ನಿರ್ದೇಶನದ ಪ್ರಕಾರ ಅಧಿಕೃತ ಆವೃತ್ತಿಯು ಆರು ಚರಣಗಳನ್ನು ಒಳಗೊಂಡಿದ್ದು, ಸಾಮೂಹಿಕ ಗಾಯನದ ಸಂದರ್ಭದಲ್ಲಿ ಅದೇ ಆವೃತ್ತಿಯನ್ನು ಬಳಸಬೇಕೆಂದು ಅರ್ಜಿದಾರರು ವಾದಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಇದರ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. “ಟೆಲಿಪ್ರಾಂಪ್ಟರ್ ಅಥವಾ ಕಾಗದದ ಚೀಟಿ ನೋಡದೆ ವಂದೇ ಮಾತರಂನ ಎಲ್ಲಾ ಚರಣಗಳನ್ನು ಹಾಡಿ ತೋರಿಸಿ. ಅವರು ಹಾಗೆ ಮಾಡಿದರೆ ನಾನು ರಾಜೀನಾಮೆ ನೀಡುತ್ತೇನೆ,” ಎಂದು ಅವರು ಹೇಳಿದ್ದಾರೆ. ವಂದೇ ಮಾತರಂನ ಚರಣಗಳ ಕುರಿತು ಆರಂಭವಾದ ವಿವಾದ ಇದೀಗ ಕೇಂದ್ರದ ನಿರ್ದೇಶನ, ರಾಜ್ಯ ಸರ್ಕಾರದ ಆದೇಶ ಹಾಗೂ ಕಾಂಗ್ರೆಸ್–ಬಿಜೆಪಿ ನಾಯಕರ ನಡುವಿನ ರಾಜಕೀಯ ವಾಗ್ವಾದದ ರೂಪ ಪಡೆದಿದೆ.

By Ravikumar - 16-09-2026


Ads in Post