ಮುಂಬೈ: ಭಾವಿ ಪತಿಯನ್ನ ಕೋಟೆ ಮೇಲಿಂದ ತಳ್ಳಿ ಕೊಲೆ ಮಾಡಿದ್ದ ಸಿಯಾ ಗೋಯಲ್ (Siya Goyal) ಪೋಷಕರು ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ಮಾತನಾಡಿದ್ದು, ನನ್ನ ಮಗಳು ತಪ್ಪು ಮಾಡಿರುವುದು ಸಾಬೀತಾದರೆ ಆಕೆಯನ್ನು ಬೆಟ್ಟದ ಮೇಲಿಂದ ತಳ್ಳಿ ಕೊಂದು ಬಿಡಿ ಎಂದು ಹೆತ್ತ ಮಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ..!
ಜೂನ್ 18 ರಂದು ಸಿಯಾ ಗೋಯಲ್ ಬರ್ತ್ಡೇ ಆಚರಣೆ ಹಾಗೂ ಪ್ರಿ-ವೆಡ್ಡಿಂಗ್ ಫೋಟೋಶೂಟ್ಗಾಗಿ ಕೇತನ್ ತನ್ನ ಭಾವಿ ಪತ್ನಿ ಸಿಯಾಳನ್ನ ಕರೆದುಕೊಂಡು ಪುಣೆಯ ಲೋಹಗಡ ಕೋಟೆಗೆ (Lohagad Fort) ಬಂದಿದ್ದನು. ಆದರೆ ಈ ಮದುವೆ ಇಷ್ಟವಿಲ್ಲದ ಸಿಯಾ, ತನ್ನ ಪ್ರಿಯಕರ ಚೇತನ್ ಜೊತೆಗೂಡಿ ಕೇತನ್ನನ್ನು ಕೋಟೆಯ ಮೇಲಿಂದ ತಳ್ಳಿ ಕೊಲೆ ಮಾಡಿದ್ದಳು, ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಪರಿಗಣಿಸಿದರು, ನಂತರದ ತನಿಖೆಯಲ್ಲಿ ಇದು ಸಿಯಾ ಮತ್ತು ಆಕೆಯ ಪ್ರಿಯಕೆ ಸೇರಿಕೊಂಡು ಮಾಡಿರುವ ಉದ್ದೇಶ ಪೂರ್ವಕ ಕೊಲೆ ಎಂಬುದು ಸಾಬೀತಾಗಿತ್ತು.
ಮಗಳನ್ನ ಕೋಟೆಯಿಂದ ತಳ್ಳಿ ಕೊಂದು ಬಿಡಿ ಎಂದ ಪೋಷಕರು...!
ಇನ್ನು ಅಳಿಯನ ಕೊಲೆ ಮಾಡಿದ ಮಗಳ ಬಗ್ಗೆ ಮಾತನಾಡಿರುವ ತಾಯಿ ಪೂಜಾ ಗೋಯಲ್ " ನನ್ನ ಮಗಳು ಸಿಯಾ, ಕೇತನ್ ಜೊತೆ ಮದುವೆ ಮಾತುಕತೆ ವೇಳೆ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಇಬ್ಬರೂ ನವೆಂಬರ್ನಲ್ಲಿ ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಮದುವೆಯಾಗಲು ಸಿದ್ಧರಾಗಿದ್ದರು. ಕೇತನ್ ಸಾವು ಕೇವಲ ಒಂದು ಕುಟುಂಬವನ್ನು ಮಾತ್ರವಲ್ಲ, ಎರಡು ಕುಟುಂಬಗಳಿಗೂ ತೀವ್ರ ದುಃಖ ಉಂಟು ಮಾಡಿದೆ.
ಕೇತನ್ ಕುಟುಂಬಕ್ಕಿಂತ ಹೆಚ್ಚು ನೋವನ್ನು ನಮ್ಮ ಕುಟುಂಬ ಅನುಭವಿಸುತ್ತಿದೆ. ಆರೋಪಿ ನನ್ನ ಮಗಳಾಗಿದ್ದರೂ ಸಹ, ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಮಗಳು ತಪ್ಪಿತಸ್ಥರೆಂದು ಸಾಬೀತಾದರೆ, ಕೇತನ್ನನ್ನು ತಳ್ಳಿದ ಸ್ಥಳದಿಂದಲೇ ಅವಳನ್ನು ತಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೇತನ್ ನಮ್ಮ ಮಗ ಕೂಡ – ಸಿಯಾ ತಂದೆ ಕಣ್ಣೀರು
ಈ ಘಟನೆಯನ್ನು ನಂಬಲು ನಮಗೆ ಕಷ್ಟ. ನಾವು ಕೇತನ್ನನ್ನು ಮಗನಂತೆ ಭಾವಿಸಿದ್ದೆವು. ಆತನ ತಂದೆ ತಾಯಿ ತಮ್ಮ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ನಾವು ಸಹ ಅಷ್ಟೇ ದುಃಖಿತರಾಗಿದ್ದೇವೆ. ನಾವು ಸಹ ಅವನನ್ನು ತುಂಬಾ ಪ್ರೀತಿಸುತ್ತಿದ್ದೆವು. ನಾನು ಅವನನ್ನು ಸ್ವಂತ ಮಗನಂತೆ ಹಚ್ಚಿಕೊಂಡಿದ್ದೆ. ಒಳ್ಳೆಯ ಹುಡುಗನನ್ನು ಕಳೆದುಕೊಂಡಿದ್ದೇವೆ. ಇದರಿಂದ ನಮಗೆ ತುಂಬಾ ದುಃಖವಾಗಿದೆ ಎಂದಿದ್ದಾರೆ. ಇನ್ನು ಸಿಯಾಳ ಪ್ರಿಯಕರ ಚೇತನ್ ಬಗ್ಗೆ ನಮಗೆ ಏನೂ ತಿಳಿದಿರಲಿಲ್ಲ. ನಿಶ್ಚಿತಾರ್ಥವಾದಾಗಿನಿಂದ ಅವಳು ಕೇತನ್ ಜೊತೆ ಮಾತ್ರ ಮಾತನಾಡುತ್ತಿದ್ದಳು ಎಂದು ಸಿಯಾಳ ತಾಯಿ ಮಾಹಿತಿ ನೀಡಿದ್ದಾರೆ. ಆಕೆಯ ತಂದೆ ಕೂಡ ಮಗಳ ಪ್ರೇಮ ಸಂಬಂಧದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.