Search


ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರ ಪಾಕಿಸ್ತಾನದ ಜೊತೆ ಭಾರತ ಮರ್ಜ್ ಆಗುತ್ತೆ ; ಸಿಸಿ ಪಾಟೀಲ್ ಟೀಕೆ

ಗದಗ: ದೇಶದ ಚುಕ್ಕಾಣಿ ಕಾಂಗ್ರೆಸ್‌ ಕೈಗೆ ಸಿಕ್ಕರೆ ಭಾರತ ಮತ್ತೆ ಪಾಕಿಸ್ತಾನದೊಂದಿಗೆ ವಿಲೀನವಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಕಲ್ಯಾಣ ಕೇಂದ್ರದಲ್ಲಿ ನಡೆದ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ನೇತೃತ್ವದ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಸರ್ಕಾರದ ವಿಮಾನ ಇನ್ನೂ ಟೇಕ್‌ಆಫ್‌ ಆಗುವ ಹಂತಕ್ಕೆ ಬಂದಿಲ್ಲ, ರನ್‌ವೇಯಲ್ಲೇ ನಿಂತಿದೆ ಎಂದು ವ್ಯಂಗ್ಯವಾಡಿದರು.

ತಮ್ಮ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಕಾಂಗ್ರೆಸ್‌ ಎಸ್‌ಐಆರ್‌, ಇವಿಎಂ ಹಾಗೂ ಕೇಂದ್ರ ಸರ್ಕಾರದ ವಿಚಾರಗಳನ್ನು ಮುಂದಿಟ್ಟುಕೊಂಡು ಮಾತನಾಡುತ್ತಿದೆ ಎಂದು ಸಿ.ಸಿ. ಪಾಟೀಲ್‌ ಆರೋಪಿಸಿದರು. ಬರ ಪರಿಹಾರವಾಗಿ ರೈತರಿಗೆ ₹2,500 ನೀಡುವುದಾಗಿ ಘೋಷಿಸಿರುವುದನ್ನು ಟೀಕಿಸಿದ ಅವರು, ಇಂತಹ ಬೃಹತ್‌ ಘೋಷಣೆ ಜಗತ್ತಿನ ಎಂಟನೇ ಅದ್ಭುತದಂತಿದೆ ಎಂದು ವ್ಯಂಗ್ಯವಾಡಿದರು. ರೈತಪರ ಸರ್ಕಾರ ಎಂದು ಹೇಳಿಕೊಳ್ಳುವ ಸರ್ಕಾರ ರೈತರಿಗೆ ನೀಡುತ್ತಿರುವ ಪರಿಹಾರದ ಮೊತ್ತವೇ ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.

ಎಸ್‌ಐಆರ್‌ ಮತ್ತು ಇವಿಎಂ ಕುರಿತು ಕಾಂಗ್ರೆಸ್‌ ನಾಯಕರು ಅನುಮಾನ ವ್ಯಕ್ತಪಡಿಸುತ್ತಿರುವುದನ್ನೂ ಸಿ.ಸಿ. ಪಾಟೀಲ್‌ ಪ್ರಶ್ನಿಸಿದರು. ಕಾಂಗ್ರೆಸ್‌ 133 ಸ್ಥಾನಗಳನ್ನು ಗೆದ್ದಾಗ ಇವಿಎಂ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದವೇ, ಆದರೆ ಲೋಕಸಭಾ ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂ ಸರಿಯಿಲ್ಲ ಎಂದು ಹೇಳುವುದು ಏಕೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರಕ್ಕೆ ಸಮರ್ಥ ಆಲೋಚನಾ ಶಕ್ತಿ ಇರಬೇಕು. ಯಾವುದೇ ರಾಜ್ಯದ ಮುಖ್ಯಮಂತ್ರಿಗೂ ಎಲ್ಲ ವಿಚಾರಗಳ ಬಗ್ಗೆ ಸಂಪೂರ್ಣ ಜ್ಞಾನ ಇರುವುದಿಲ್ಲ; ಹೀಗಾಗಿ ತಾಂತ್ರಿಕ ಪರಿಣಿತರನ್ನೊಳಗೊಂಡ ಸಮಿತಿಗಳನ್ನು ರಚಿಸಿಕೊಂಡು ಆಡಳಿತ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

By Ravikumar - 05-10-2026


Ads in Post