ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಡಲು ಸಿದ್ದವಾಗಿವೆ. ಇದರ ನಡುವೆ ಮಳೆಯಿಂದ ಪಂದ್ಯ ರದ್ದಾದರೆ ಟ್ರೋಫಿ ಯಾರಿಗೆ ಸಿಗಲಿದೆ ಎಂಬ ಚರ್ಚೆಗಳು ಆರಂಭವಾಗಿದ್ದು. ಈ ಕುರಿತಾದ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಎರಡೂ ತಂಡಗಳು ಸೀಸನ್ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಚಾಂಪಿಯನ್ ಆಗುವತ್ತ ಅಂತಿಮ ಹೆಜ್ಜೆ ಇಟ್ಟಿವೆ. ಆದರೆ ಫೈನಲ್ ಪಂದ್ಯದ ದಿನದಂದು ಮಳೆ ಬಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಅಥವಾ ಇತರೆ ಕಾರಣದಿಂದಾಗಿ ಪಂದ್ಯ ನಡೆಯದಿದ್ದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗಲಿದೆ? ಹಾಗೆಯೇ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ ಎಂಬ ಪ್ರಶ್ನೆ ಮೂಡಿದೆ.
-1780136136308.jpg)
ಇಂದು ಪಂದ್ಯ ರದ್ದಾದರೆ, ನಾಳೆ ನಡೆಯುತ್ತೇ ಮ್ಯಾಚ್...!
ಐಪಿಎಲ್ನಲ್ಲಿ ಲೀಗ್ ಹಂತ ಹಾಗೂ ಪ್ಲೇಆಫ್ ಸುತ್ತಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಲೀಗ್ ಹಂತದಲ್ಲಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತಿತ್ತು. ಆದರೆ ಪ್ಲೇಆಫ್ ಸುತ್ತಿಗೆ ಆ ನಿಯಮ ಅನ್ವಯವಾಗುತ್ತಿರಲಿಲ್ಲ. ಹೀಗಾಗಿ ಪ್ಲೇಆಫ್ ಸುತ್ತಿನಲ್ಲಿ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಯಾವ ತಂಡ ಮೇಲಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತಿತ್ತು. ಏಕೆಂದರೆ ಪ್ಲೇಆಫ್ಗೂ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.
ಒಂದು ವೇಳೆ ಇಂದಿನ ಪಂದ್ಯದಲ್ಲಿ ನಿರಂತರವಾಗಿ ಮಳೆ ಬಂದರೆ ಓವರ್ ಕಡಿತಗೊಳಿಸಿ ಪಂದ್ಯ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ವೇಳೆಯೂ ಮಳೆ ಬಂದರೆ ಹೆಚ್ಚುವರಿಯಾಗಿ 120 ನಿಮಿಷಗಳನ್ನ ನೀಡಲಾಗುತ್ತದೆ. ಜೊತೆಗೆ ಪ್ರತಿ ಇನ್ನಿಂಗ್ಸ್ನಲ್ಲಿ ಕನಿಷ್ಟ 5 ಓವರ್ಗಳನ್ನು ಆಡಲಾಗುತ್ತದೆ. ಅದಾಗ್ಯೂ ಪಂದ್ಯವನ್ನ ನಡೆಸಲು ಸಾಧ್ಯವಾಗದಿದ್ದರೆ, ಜೂನ್ 1 ರಂದು ಪಂದ್ಯವನ್ನು ನಡೆಸಲಾಗುವುದು. ಏಕೆಂದರೆ ಜೂನ್ 1 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ.
ಜೂನ್ 1 ರಂದು ಸಹ ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಅಗ್ರಸ್ಥಾನ ಪಡೆದಿರುತ್ತದೋ ಆ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇದರರ್ಥ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್ಸಿಬಿ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇತ್ತ ಎರಡನೇ ಸ್ಥಾನ ಪಡೆದುಕೊಂಡಿದ್ದ ಗುಜರಾತ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.