ಮೀರತ್: ಉತ್ತರ ಪ್ರದೇಶದ ಮೀರತ್ನಲ್ಲಿ ಪತಿಯನ್ನು ಹತ್ಯೆಗೈದು, ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪತಿ ಅಮಿತ್ ಕಶ್ಯಪ್ ಕೊಲೆ ಪ್ರಕರಣದಲ್ಲಿ ಪತ್ನಿ ರವಿತಾ ಹಾಗೂ ಆಕೆಯ ಪ್ರಿಯಕರ ಅಮರ್ದೀಪ್ಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ADJ-12) ಮರಣದಂಡನೆ ಶಿಕ್ಷೆ ವಿಧಿಸಿದೆ. ಇತ್ತೀಚೆಗೆ ನಡೆದ ಬ್ಲೂಡ್ರಮ್ ಕೊಲೆ ಪ್ರಕರಣದ ತೀರ್ಪಿನ ಬೆನ್ನಲ್ಲೇ ಮತ್ತೊಂದು ಜೋಡಿಗೆ ಮರಣದಂಡನೆ ವಿಧಿಸಿರುವುದು ಗಮನ ಸೆಳೆದಿದೆ.
ಉತ್ತರ ಪ್ರದೇಶದ ಅಕ್ಬರ್ಪುರ ಸಾದಾತ್ ಗ್ರಾಮದ ನಿವಾಸಿ ಅಮಿತ್ ಕಶ್ಯಪ್ 2025ರ ಏಪ್ರಿಲ್ 12ರಂದು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಕೆಳಗೆ ಹಾವೊಂದು ಸಿಕ್ಕಿದ್ದರಿಂದ, ಹಾವು ಕಚ್ಚಿದ್ದರಿಂದಲೇ ಅಮಿತ್ ಮೃತಪಟ್ಟಿರಬಹುದು ಎಂದು ಕುಟುಂಬಸ್ಥರು ಆರಂಭದಲ್ಲಿ ಭಾವಿಸಿದ್ದರು. ಆದರೆ, ಮೃತದೇಹದ ಕತ್ತಿನ ಭಾಗದಲ್ಲಿ ಗಾಯಗಳಿದ್ದ ಕಾರಣ ಪ್ರಕರಣದ ಬಗ್ಗೆ ಅನುಮಾನ ಮೂಡಿತ್ತು.
ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ಅಮಿತ್ ಹಾವು ಕಚ್ಚಿ ಮೃತಪಟ್ಟಿಲ್ಲ, ಬದಲಾಗಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿತ್ತು. ಬಳಿಕ ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಅಮಿತ್ ಪತ್ನಿ ರವಿತಾ ಮತ್ತು ಅಮರ್ದೀಪ್ ನಡುವೆ ಅನೈತಿಕ ಸಂಬಂಧವಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು. ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು ಎಂಬ ಆರೋಪವೂ ತನಿಖೆಯಲ್ಲಿ ಮುನ್ನೆಲೆಗೆ ಬಂದಿತ್ತು.
ಪೊಲೀಸರ ತನಿಖೆಯ ಪ್ರಕಾರ, ಅಮಿತ್ನನ್ನು ಹತ್ಯೆಗೈದ ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆತನ ದೇಹದ ಮೇಲೆ ಹಾವನ್ನು ಇರಿಸಲಾಗಿತ್ತು. ಇದರಿಂದ ಹಾವು ಕಚ್ಚಿ ಸಾವು ಸಂಭವಿಸಿದೆ ಎಂಬಂತೆ ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು ಎನ್ನಲಾಗಿದೆ. ಕೊಲೆಗೆ ಬಳಸಿದ ಹಾವನ್ನು ಪರಿಶೀಲಿಸಿದಾಗ ಅದರ ವಿಷದ ಗ್ರಂಥಿಯನ್ನು ಮೊದಲೇ ತೆಗೆದುಹಾಕಿರುವುದು ಪತ್ತೆಯಾಗಿತ್ತು. ಹಾವನ್ನು ಪೂರೈಸಿದ ವ್ಯಕ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ ಪೊಲೀಸರು, ಆತ ನೀಡಿದ ಮಾಹಿತಿಯ ಆಧಾರದ ಮೇಲೆ ರವಿತಾ ಮತ್ತು ಅಮರ್ದೀಪ್ನನ್ನು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು 500ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ವೇಳೆ 12ಕ್ಕೂ ಹೆಚ್ಚು ಸಾಕ್ಷಿಗಳನ್ನು ಪರಿಶೀಲಿಸಲಾಗಿತ್ತು. ಅಲ್ಲದೆ, ಅಮಿತ್ ಸಾವಿನ ಬಳಿಕದ ನಾಲ್ಕು ದಿನಗಳಲ್ಲಿ ಆರೋಪಿಗಳು 70ಕ್ಕೂ ಹೆಚ್ಚು ಬಾರಿ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು ಎಂಬುದು ಕರೆ ದಾಖಲೆಗಳಿಂದ ತಿಳಿದುಬಂದಿತ್ತು. ಒಟ್ಟಾರೆಯಾಗಿ 500ಕ್ಕೂ ಹೆಚ್ಚು ಕರೆಗಳ ವಿವರಗಳು ತನಿಖೆಯ ಭಾಗವಾಗಿದ್ದವು.
ಪ್ರಾಸಿಕ್ಯೂಷನ್ ಪರ ಜಿಲ್ಲಾ ಸರ್ಕಾರಿ ಅಭಿಯೋಜಕ ಕೆ.ಕೆ. ಚೌಬೆ, ಸರ್ಕಾರಿ ಅಭಿಯೋಜಕಿ ಫರ್ಜಾನಾ ಹಾಗೂ ಸಂತ್ರಸ್ತ ಕುಟುಂಬದ ಪರ ವಕೀಲ ಬಲ್ರಾಜ್ ಸಿಂಗ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇದು ಪೂರ್ವಯೋಜಿತ ಕೊಲೆ ಮತ್ತು ಅಪರಾಧವನ್ನು ಮರೆಮಾಚಲು ನಡೆಸಿದ ಪ್ರಯತ್ನ ಎಂದು ವಾದಿಸಿದ ಅವರು, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದರು. ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಆರೋಪಿಗಳು, ನ್ಯಾಯಾಲಯ ನೀಡುವ ಯಾವುದೇ ಶಿಕ್ಷೆಯನ್ನು ಸ್ವೀಕರಿಸುವುದಾಗಿ ಹೇಳಿದ್ದರು.
ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಮೀರತ್ನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರವಿತಾ ಮತ್ತು ಅಮರ್ದೀಪ್ಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಪತಿಯ ಕೊಲೆಯನ್ನು ಹಾವು ಕಚ್ಚಿದ ಸಾವೆಂದು ಬಿಂಬಿಸಲು ಯತ್ನಿಸಿದ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ಈ ತೀರ್ಪು ಗಮನಾರ್ಹವಾಗಿದೆ.