Search


GDP ಬೆಳವಣಿಗೆಯಲ್ಲಿ ದಾಖಲೆ ಬರೆದ ಭಾರತ; ಸಾಧನೆಯನ್ನ ಕೊಂಡಾಡಿದ ಮೋದಿ

ನವದೆಹಲಿ: 2026-27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (GDP) ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿದೆ.

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಹಣಕಾಸು, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ ಹಾಗೂ ವೃತ್ತಿಪರ ಸೇವಾ ಕ್ಷೇತ್ರಗಳ ಉತ್ತಮ ಪ್ರದರ್ಶನವು ಆರ್ಥಿಕ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9ರಷ್ಟಿತ್ತು. ಈ ಬಾರಿ ಅದು ಶೇ. 7.8ಕ್ಕೆ ಏರಿಕೆಯಾಗಿದೆ. ಆದರೆ 2025-26ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ದಾಖಲಾಗಿದ್ದ ಶೇ. 8.6ರಷ್ಟು ಬೆಳವಣಿಗೆಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ.

ಆರ್‌ಬಿಐ ಅಂದಾಜಿಗಿಂತ ಉತ್ತಮ ಸಾಧನೆ

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆರ್ಥಿಕ ಬೆಳವಣಿಗೆ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಚ್ಚರಿಕೆಯ ಅಂದಾಜು ನೀಡಿತ್ತು. ಆದರೆ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದೆ. ಸ್ಥಿರ ಬೆಲೆಗಳ ಆಧಾರದ ಮೇಲೆ ದೇಶದ ನೈಜ ಜಿಡಿಪಿ ಕಳೆದ ವರ್ಷದ 75.46 ಲಕ್ಷ ಕೋಟಿ ರೂ.ನಿಂದ 81.36 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ವೇಳೆ, ಹಣದುಬ್ಬರವನ್ನು ಒಳಗೊಂಡ ನಾಮಮಾತ್ರ ಜಿಡಿಪಿ ಶೇ. 10.3ರಷ್ಟು ಬೆಳವಣಿಗೆ ಕಂಡು 88.27 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಮೋದಿ ಮೆಚ್ಚುಗೆ

ಭಾರತದ ಆರ್ಥಿಕ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 2026-27ರ ಮೊದಲ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿರುವುದು ದೇಶದ ಸಾಮೂಹಿಕ ಶಕ್ತಿ ಮತ್ತು ಜನರ ಪರಿಶ್ರಮದ ಫಲ ಎಂದು ಅವರು ಹೇಳಿದ್ದಾರೆ.ದೇಶದ ಜನರ ಶ್ರಮ ಮತ್ತು ಆರ್ಥಿಕತೆಯ ಮೇಲಿನ ವಿಶ್ವಾಸದಿಂದ ಭಾರತ ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಭಾರತದ ಆರ್ಥಿಕ ಸಾಧನೆಯನ್ನು ಸ್ವಾಗತಿಸಿದ್ದಾರೆ. ಈ ಬಲವಾದ ಬೆಳವಣಿಗೆಯ ಹಿಂದೆ ದೇಶದ ಜನರ ಕಠಿಣ ಪರಿಶ್ರಮವಿದೆ ಎಂದು ಅವರು ಹೇಳಿದ್ದಾರೆ.ಎನ್‌ಡಿಎ ಸರ್ಕಾರ ಜಾರಿಗೆ ತಂದ ಆರ್ಥಿಕ ಸುಧಾರಣೆಗಳು ಮತ್ತು ಪರಿಣಾಮಕಾರಿ ಆರ್ಥಿಕ ನಿರ್ವಹಣೆ ಈಗ ಉತ್ತಮ ಫಲಿತಾಂಶ ನೀಡುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

By Ravikumar - 01-09-2026


Ads in Post