ಪುರಿ: ಭಾರತವು ತನ್ನ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳ ದೃಷ್ಟಿಯಿಂದ ಈಗಾಗಲೇ ಹಿಂದೂ ದೇಶವಾಗಿದ್ದು, ರಾಜಕೀಯ ಮತ್ತು ಸಾಂವಿಧಾನಿಕವಾಗಿಯೂ ಭಾರತವನ್ನು ಅಧಿಕೃತವಾಗಿ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಾದ್ವಿ ರಿತಂಭರ ಅಭಿಪ್ರಾಯಪಟ್ಟಿದ್ದಾರೆ.
ಒಡಿಶಾದ ಪುರಿಯ ಶ್ರೀ ಜಗನ್ನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಹಿಂದೂ ರಾಷ್ಟ್ರ’ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದರು. ಪುರಿಯ ಬಲಿಯಾಪಂಡಾದಲ್ಲಿ ನಡೆಯುತ್ತಿರುವ ಏಳು ದಿನಗಳ ಭಾಗವತ ಕಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ಸಾದ್ವಿ ರಿತಂಭರ, ಭಾರತದ ಸಾಂಸ್ಕೃತಿಕ ಅಸ್ಮಿತೆಯಲ್ಲಿ ಸನಾತನ ಪರಂಪರೆಯ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ ಎಂದು ಹೇಳಿದರು.
“ಭಾರತದ ಬಹುಸಂಖ್ಯಾತರ ಚಿಂತನೆ ‘ವಸುಧೈವ ಕುಟುಂಬಕಂ’ ಎಂಬ ಉದಾತ್ತ ತತ್ವದ ಮೇಲೆ ನಿಂತಿದೆ. ಇಡೀ ಜಗತ್ತನ್ನೇ ಒಂದು ಕುಟುಂಬವೆಂದು ಕಾಣುವ ಈ ಚಿಂತನೆ ಭಾರತದ ಸಂಸ್ಕೃತಿಯ ಮೂಲವಾಗಿದೆ. ಭಾರತೀಯ ಸಂವಿಧಾನದ ಮೂಲ ಪ್ರತಿಯಲ್ಲಿರುವ ಶ್ರೀರಾಮನ ಚಿತ್ರದಿಂದ ಹಿಡಿದು ‘ಸತ್ಯಮೇವ ಜಯತೆ’ ಎಂಬ ಧೈಯವಾಕ್ಯದವರೆಗೆ ದೇಶದ ಸನಾತನ ಸಾಂಸ್ಕೃತಿಕ ಗುರುತು ಪ್ರತಿಬಿಂಬಿಸುತ್ತದೆ” ಎಂದು ಅವರು ತಿಳಿಸಿದರು. ಹಿಂದೂಗಳ ಕಲ್ಯಾಣವೇ ಭಾರತದ ಕಲ್ಯಾಣವಾಗಿದ್ದು, ಸಂಸ್ಕೃತಿ ಮತ್ತು ನಡವಳಿಕೆಯಲ್ಲಿ ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ಹೀಗಾಗಿ ಸಾಂವಿಧಾನಿಕ ಮತ್ತು ರಾಜಕೀಯವಾಗಿಯೂ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕೆಂದು ಅವರು ಪ್ರತಿಪಾದಿಸಿದರು.
ಇದೇ ವೇಳೆ ಗೋರಕ್ಷಣೆ ಹಾಗೂ ಮಹಿಳೆಯರ ಸುರಕ್ಷತೆ ಕುರಿತು ಮಾತನಾಡಿದ ಸಾದ್ವಿ ರಿತಂಭರ, ಗೋಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹೆಣ್ಣು ಭ್ರೂಣಹತ್ಯೆ ನಡೆಯುವ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಸಾಧ್ಯವಿಲ್ಲ ಎಂದು ಹೇಳಿದರು. “ಸರ್ಕಾರಗಳು ಆದಾಯ ಗಳಿಸಲು ಹಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಆದರೆ ಗೋಮಾಂಸ ಮಾರಾಟದ ಮೂಲಕ ಆದಾಯ ಗಳಿಸುವುದು ಘೋರ ಪಾಪ” ಎಂದು ಅವರು ಕಳವಳ ವ್ಯಕ್ತಪಡಿಸಿದರು.