Search


ಅರಬ್ಬಿ ಸಮುದ್ರದಲ್ಲಿ ಭಾರತ ಮತ್ತು ಪಾಕ್‌ ಯುದ್ದನೌಕೆಗಳು ಪರಸ್ಪರ ಡಿಕ್ಕಿ; ಪಾಕ್‌ ಅಧಿಕಾರಿಗೆ ತರಾಟೆ

ನವದೆಹಲಿ: ಅರಬ್ಬಿ ಸಮುದ್ರದ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಪಾಕಿಸ್ತಾನ ನೌಕಾಪಡೆಯ ಹಡಗಿನ ನಡುವೆ ಮಂಗಳವಾರ ಸಂಜೆ ಪರಸ್ಪರ ಡಿಕ್ಕಿ ಸಂಭವಿಸಿದೆ.ಭಾರತೀಯ ಯುದ್ಧನೌಕೆ ನಿಯಮಿತ ಕಣ್ಗಾವಲು ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ, ಪಾಕಿಸ್ತಾನದ ಹಡಗು ಅತಿ ವೇಗದಲ್ಲಿ ಚಲಿಸಿ ಡಿಕ್ಕಿ ಸಂಭವಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಘಟನೆಯಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಆದರೆ, ಘಟನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ದೆಹಲಿಯಲ್ಲಿರುವ ಪಾಕಿಸ್ತಾನದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡು, ಭಾರತದ ಪರವಾಗಿ ತೀವ್ರ ಪ್ರತಿಭಟನೆ ದಾಖಲಿಸಲಾಗಿದೆ.

1991ರ ಏಪ್ರಿಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಮರಾಭ್ಯಾಸಗಳು ಹಾಗೂ ಸೇನಾ ಚಲನವಲನಗಳ ಮುನ್ಸೂಚನೆಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಒಪ್ಪಂದದ 10ನೇ ವಿಧಿಯನ್ನು ಪಾಕಿಸ್ತಾನ ನೌಕಾಪಡೆಯ ಹಡಗಿನ ವರ್ತನೆ ಉಲ್ಲಂಘಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪಾಕಿಸ್ತಾನದ ಎಲ್ಲಾ ಸೇನಾ ಪಡೆಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸಂದೇಶವನ್ನು ಪಾಕಿಸ್ತಾನಿ ಅಧಿಕಾರಿಗಳಿಗೆ ರವಾನಿಸುವಂತೆ ಪಾಕ್ ರಾಯಭಾರಿಗೆ ಭಾರತ ಸೂಚಿಸಿದೆ.

By Ravikumar - 16-09-2026


Ads in Post