Search


ತಾಯಿಯ ಸಾವೇ ಪ್ರೇರಣೆ; ಜೀವಜಲ ಹಂಚುವುದನ್ನೇ ಕಾಯಕ ಮಾಡಿಕೊಂಡ ಮಗ

ಲಖ್ನೋ : ಸಾಮಾನ್ಯವಾಗಿ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇರೋ ಜನ ಬೇರೆಯವರ ಬಗ್ಗೆ ಯೋಚಿಸೋದು ತುಂಬಾ ಕಡಿಮೆ, ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮೃತ ತಾಯಿಯ ನೆನಪಿನಲ್ಲಿ ಪ್ರತಿದಿನ ನೂರಾರು ಜನರಿಗೆ ನೀರುಣಿಸುತ್ತ, ಬಾಯಾರಿದವರ ದಾಹ ತಣಿಸುತ್ತಿದ್ದು. ಯಾವುದೇ ಪ್ತತಿಫಲ ಅಪೇಕ್ಷೆ ಇಲ್ಲದೆ ಈ ಕೆಲಸ ಮಾಡ್ತಿದ್ದಾನೆ. ಉತ್ತರ ಪ್ರದೇಶದ ಘನಶ್ಯಾಮ್‌ ಎಂಬಾತ ತನ್ನ ದುಡಿಮೆಯ ಬಹುಪಾಲನ್ನು ಈ ಸಮಾಜ ಮುಖಿ ಕೆಲಸಕ್ಕೆ ಮುಡಿಪಾಗಿಡುತ್ತಿದ್ದು, ಆತ ಮಾಡ್ತಿರುವ ಪುಣ್ಯದ ಕೆಲಸವಾದರು ಏನು ಎಂಬುದನ್ನ ನೋಡೋಣ ಬನ್ನಿ.

ಶುದ್ದ ನೀರು ಸಿಗದೆ ತಾಯಿ ಸಾವು... ಧೃಡ ಸಂಕಲ್ಪ ಮಾಡಿದ ಮಗ...!

ಘನಶ್ಯಾಮ್ ಸಿಂಗ್ ಮೌರ್ಯ ಮೂಲತಃ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಹರೌರಾ ಗ್ರಾಮದವರು. ಇದು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಇಲ್ಲಿ ಶುದ್ದ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಇದೆ. ಇದೇ ಕಾರಣದಿಂದಾಗಿ ಘನಶ್ಯಾಮ್‌ 2017ರಲ್ಲಿ ತನ್ನ ತಾಯಿಯನ್ನ ಕಳೆದುಕೊಂಡರು. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋದ ಘನಶ್ಯಾಮ್‌ ಧೃಡ ಸಂಕಲ್ಪವನ್ನ ಮಾಡಿದರು. ಅಂದಿನಿಂದ ಪ್ರತಿದಿನ ಸುತ್ತಮುತ್ತಲಿನ ಜನಸಂದಣಿ ಪ್ರದೇಶದಲ್ಲಿ ಮಡಿಕೆ ಇಟ್ಟು ಅದಕ್ಕೆ ನೀರು ತುಂಬಿಸುವ ಕೆಲಸ ಆರಂಭ ಮಾಡಿದರು.  ಪ್ರತಿ ಬೇಸಿಗೆಯಲ್ಲಿ ಜನನಿಬಿಡ ಪ್ರದೇಶಗಳು, ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಸರ್ಕಾರಿ ಆಸ್ಪತ್ರೆಗಳು ಮತ್ತು ಕಾರ್ಮಿಕರು ಕೆಲಸಕ್ಕಾಗಿ ಸೇರುವ ಇತರ ಸ್ಥಳಗಳಲ್ಲಿ ನೀರನ್ನು ಒದಗಿಸುತ್ತಿದ್ದಾರೆ. ಆರಂಭದಲ್ಲಿ ರಿಕ್ಷಾ ಬಳಸಿ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿ ಈ ಕೆಲಸ ಮಾಡುತ್ತಿದ್ದ ಘನ್‌ಶ್ಯಾಮ್‌ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಇದೀಗ ಕೈಗಾಡಿ ಬಳಸಿ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಸೇವೆಯನ್ನ ಮಾಡ್ತಿದ್ದಾರೆ.

ಮುಂಜಾನೆ 4 ಗಂಟೆಯಿಂದಲೇ ಕೆಲಸ ಆರಂಭ.,..!

ನೀರು ತುಂಬಿಸುವ ನಿಗದಿತ ಸ್ಥಳದಲ್ಲಿ ಮಡಿಕೆಗಳನ್ನ ಇಟ್ಟಿರುವ ಘನಶ್ಯಾಮ್‌, ಅವುಗಳಿಗೆ ನೀರನ್ನು ಭರ್ತಿ ಮಾಡಲು ಬೆಳಿಗ್ಗೆ 4 ಗಂಟೆಗೆ ಮನೆಯಿಂದ ಹೊರಡುತ್ತಾರೆ, ಹತ್ತಿರದಲ್ಲಿರುವ ಆರ್‌ಓ ಪ್ಲಾಂಟ್‌ ಮೂಲಕ ತಮ್ಮ ಡ್ರಮ್‌ಗಳಿಗೆ ನೀರು ತುಂಬಿಸಿಕೊಳ್ಳುವ ಇವರು, ಅಲ್ಲಿಂದ ತಾವು ಇಟ್ಟಿರುವ ಮಡಿಕೆಗಳಿಗೆ ನೀರು ತುಂಬಿಸಿಕೊಂಡು ಬರುತ್ತಾರೆ. ನೀರಿನ ಜೊತೆಗ ಹಸಿದರವರಿಗಾಗಿ ಬಿಸ್ಕೆಟ್‌ಗಳನ್ನು ಅಲ್ಲಿ ಇಟ್ಟಿರುತ್ತಾರೆ. ಇವರ ಈ ಕೆಲಸದಿಂದ ಸುತ್ತಮುತ್ತಲಿನ ಜನ ಇವರಿಗೆ "ಮಟ್ಕಾಮ್ಯಾನ್‌" ಎಂಬ ಬಿರುದನ್ನ ಕೊಟ್ಟಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ಘನಶ್ಯಾಮ್‌  "ನಾನು ಜನರಿಗೆ ಶುದ್ಧ ನೀರನ್ನು ಒದಗಿಸಲು ಬಯಸಿದ್ದೆ, ಆದರೆ ಹಳ್ಳಿಗೆ ಕೊಳವೆ ಬಾವಿ ಕೊರೆಯಲು ಅಥವಾ ಶೋಧನಾ ಘಟಕವನ್ನು ಸ್ಥಾಪಿಸಲು ನನಗೆ ಸಾಧ್ಯವಾಗಲಿಲ್ಲ . ನಾನು ಮಾಡಬಹುದಾದದ್ದು ಒಂದು ಮಡಕೆಗೆ ಕುಡಿಯುವ ನೀರನ್ನು ತುಂಬಿಸಿ ಅವರಿಗೆ ಕೊಂಡೊಯ್ಯುವುದು ಮಾತ್ರ. ಇದಕ್ಕಾಗಿ ನಾನು ದಿನಗೂಲಿ ಕಾರ್ಮಿಕನಾಗಿ ಗಳಿಸಿದ ಹಣವನ್ನ ಬಳಸುತ್ತಿದ್ದೇನೆ".ಎಂದು ಹೇಳಿದರು.

ಘನಶ್ಯಾಮ್ ಮತ್ತು ಶಶಿ ಲತಾ ಅವರಿಗೆ ಮೂವರು ಮಕ್ಕಳಿದ್ದಾರೆ - ಇಬ್ಬರು ಗಂಡು ಮಕ್ಕಳು ಮತ್ತು ಮಗಳು. ಗಂಡ ಮತ್ತು ಹೆಂಡತಿ ಇಬ್ಬರಿಗೂ ಸರ್ಕಾರಿ ಉದ್ಯೋಗ ಕಾರ್ಡ್‌ಗಳಿವೆ, ಆದರೆ ವರ್ಷಪೂರ್ತಿ ಕೆಲಸದ ಖಾತರಿ ಇಲ್ಲ. ಬೇಸಿಗೆಯ ನಾಲ್ಕು ಕಠಿಣ ತಿಂಗಳುಗಳಲ್ಲಿ, ಬಾವಿಗಳಲ್ಲಿ ನೀರು ಕಡಿಮೆಯಾಗುವಾಗ ಮತ್ತು ಕಾರ್ಮಿಕರಿಗೆ ಹೆಚ್ಚು ನೀರು ಬೇಕಾಗುವಾಗ, ಅವರು ತಮ್ಮ ಇಡೀ ದಿನವನ್ನು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುವುದರಲ್ಲಿ ಕಳೆಯುತ್ತಾರೆ. ಧನಶ್ಯಾಮ್ ಅವರನ್ನು ಜಿಲ್ಲೆಯಾದ್ಯಂತ "ಮಟ್ಕಾ ಮ್ಯಾನ್" ಎಂದು ಕರೆಯಲಾಗುತ್ತದೆ. ಜನರು ಈ ದಂಪತಿಗಳನ್ನು ಹೊಗಳುವುದರಲ್ಲಿ ಎಂದಿಗೂ ಆಯಾಸಗೊಳ್ಳುವುದಿಲ್ಲ. ಸ್ವಾರ್ಥವು ಅತಿರೇಕಕ್ಕೆ ಹೋಗಿರುವ ಸಮಯದಲ್ಲಿ, ಧನಶ್ಯಾಮ್ ಮತ್ತು ಅವರ ಪತ್ನಿ ಮಾನವೀಯತೆಯ ಮಾದರಿಯನ್ನು ತೋರಿಸುತ್ತಿದ್ದಾರೆ.

By thebigbulletin.com - 19-05-2026


Ads in Post