Search


ಭಾರತದಲ್ಲಿ ಹೂಡಿಕೆ ಮಾಡಿ, ಲಾಭ ಪಡೆಯಿರಿ; ಬ್ರಿಕ್ಸ್ ರಾಷ್ಟ್ರಗಳಿಗೆ ಮೋದಿ ಕರೆ

ನವದೆಹಲಿ: 2014ರ ಬಳಿಕ ಭಾರತವು ಸುಮಾರು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು, ಜಾಗತಿಕ ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ಈ ಅವಕಾಶಗಳ ಲಾಭವನ್ನು ಪಡೆಯುವಂತೆ ಅವರು ಬ್ರಿಕ್ಸ್‌ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

ದೆಹಲಿಯ ಭಾರತ್‌ ಮಂಟಪದಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಮೋದಿ, ಬ್ರಿಕ್ಸ್‌ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದರು. ಪ್ರತಿ ವರ್ಷ ನೂರಾರು ಸ್ಟಾರ್ಟ್‌ಅಪ್‌ಗಳನ್ನು ಬೆಳೆಸುವ ಸಾಮರ್ಥ್ಯ ಬ್ರಿಕ್ಸ್‌ ರಾಷ್ಟ್ರಗಳಿಗಿದೆ ಎಂದು ಹೇಳಿದರು.

ವಿಶ್ವವು ಮಹತ್ವದ ರಚನಾತ್ಮಕ ಬದಲಾವಣೆಯ ಹಂತದಲ್ಲಿದ್ದು, ಈ ಬದಲಾವಣೆಗಳನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು. ಜಿ7ಗಿಂತಲೂ ಬ್ರಿಕ್ಸ್‌ ವೇಗವಾಗಿ ಮುನ್ನಡೆಯುತ್ತಿದ್ದು, ಜಾಗತಿಕ ಆರ್ಥಿಕತೆಯ ಸುಮಾರು ಶೇ.40ರಷ್ಟು ಭಾಗವನ್ನು ಬ್ರಿಕ್ಸ್‌ ರಾಷ್ಟ್ರಗಳು ಪ್ರತಿನಿಧಿಸುತ್ತವೆ ಎಂದು ಅವರು ತಿಳಿಸಿದರು.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಸುಸ್ಥಿರತೆಯನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಲಾಗಿದೆ. ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತ ಸ್ಥಿರವಾಗಿ ಮುನ್ನಡೆಯುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿ, ಸ್ಟಾರ್ಟ್‌ಅಪ್‌ಗಳು, ಬಾಹ್ಯಾಕಾಶ, ರಕ್ಷಣಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಮತ್ತು ಸಂಶೋಧನೆಗಳು ನಡೆಯುತ್ತಿವೆ. ಯುಪಿಐ ಮೂಲಕ ದೇಶದ ಸುಮಾರು ಶೇ.50ರಷ್ಟು ವಹಿವಾಟು ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.

ಬ್ರಿಕ್ಸ್‌ ರಾಷ್ಟ್ರಗಳು ವಿಶ್ವದ ಜನಸಂಖ್ಯೆಯ ಸುಮಾರು ಶೇ.50ರಷ್ಟನ್ನು ಹೊಂದಿದ್ದು, ಜಾಗತಿಕ ಜಿಡಿಪಿಯ ಶೇ.40ರಷ್ಟು ಹಾಗೂ ಜಾಗತಿಕ ವ್ಯಾಪಾರದ ಶೇ.25ಕ್ಕಿಂತ ಹೆಚ್ಚಿನ ಪಾಲನ್ನು ಪ್ರತಿನಿಧಿಸುತ್ತವೆ. ಜಾಗತಿಕ ಜಿಡಿಪಿ ಎರಡೂವರೆ ಪಟ್ಟು ವಿಸ್ತರಿಸಿರುವ ಅವಧಿಯಲ್ಲಿ ಬ್ರಿಕ್ಸ್‌ ರಾಷ್ಟ್ರಗಳ ಒಟ್ಟು ಜಿಡಿಪಿ ಸುಮಾರು ನಾಲ್ಕೂವರೆ ಪಟ್ಟು ಹೆಚ್ಚಾಗಿದೆ. ನಾವೀನ್ಯತೆ ಮತ್ತು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಬ್ರಿಕ್ಸ್‌ ರಾಷ್ಟ್ರಗಳು ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಭಾರತದಲ್ಲಿ ಆಯೋಜಿಸಿರುವ ಈ ವೇದಿಕೆ ಇದುವರೆಗಿನ ಅತಿದೊಡ್ಡ ಬ್ರಿಕ್ಸ್‌ ವ್ಯಾಪಾರ ವೇದಿಕೆಯಾಗಿದೆ ಎಂದು ಮೋದಿ ಹೇಳಿದರು.

By Ravikumar - 11-09-2026


Ads in Post