ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟನ್ಸ್ (ಜಿಟಿ) ತಂಡಗಳೆರಡು ಐಪಿಎಲ್ ಫೈನಲ್‌ಗೆ ತಲುಪಿವೆ. ಪಂದ್ಯಾವಳಿಯ ಸಂಭ್ರಮಾಚರಣೆ ಸಂಬಂಧ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನ ನೀಡಿದ್ದು. ಫೈನಲ್ ಪಂದ್ಯದ ಫಲಿತಾಂಶ ಬಂದ ನಂತರ ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಕೆ ಕಠಿಣ ಕ್ರಮ ಕೈಗೊಂಡಿದೆ. ನಾಳೆ (ಮೇ 31) ನಡೆಯಲಿರುವ ಫೈನಲ್ ಪಂದ್ಯದ ಫಲಿತಾಂಶ ಬಂದ ನಂತರ, ಪಟಾಕಿ ಸಿಡಿಸುವುದು, ವಾಹನಗಳಲ್ಲಿ ಜೋರಾಗಿ ಸೌಂಡ್ ಸಿಸ್ಟಂ ಹಾಕುವುದು, ಬೈಕ್ ರ್ಯಾಲಿ, ಅತಿವೇಗದ ವಾಹನ ಚಾಲನೆ, ಸ್ಟಂಟ್‌ಗಳನ್ನು ಪ್ರದರ್ಶಿಸುವುದು ಮತ್ತು ರಸ್ತೆ ತಡೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಜೊತೆಗೆ ಪಂದ್ಯದ ವೀಕ್ಷಣೆಗೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ರೀತಿಯ ಎಲ್‌ಇಡಿ ಪರದೆಗಳನ್ನ ಅಳವಡಿಸದಂತೆ ಸೂಚನೆ ನೀಡಿದ್ದು, ಈಗಾಗಲೇ ಅಳವಡಿಸಿರುವ ಪರದೆಗಳಲ್ಲಿ ಪಂದ್ಯದ ನೇರಪ್ರಸಾರ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಸಭ್ಯ ವರ್ತನೆ ನಡೆಸುವುದು, ಗಲಾಟೆ, ಅನಗತ್ಯ ವಾಗ್ವಾದಗಳಲ್ಲಿ ತೊಡಗುವುದು ಹಾಗೂ ಧ್ವನಿವರ್ಧಕಗಳನ್ನು ಬಳಸಿಕೊಳ್ಳುವುದರ ಮೇಲೂ ನಿರ್ಬಂಧ ಹೇರಲಾಗಿದೆ. ಪಂದ್ಯದ ಫಲಿತಾಂಶದ ನಂತರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತರು ತಾಕೀತು ಮಾಡಿದ್ದಾರೆ.
ಕಳೆದ ವರ್ಷ ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಅನೇಕ ಕಡೆ ಅಹಿತಕರ ಘಟನೆಗಳು ವರದಿಯಾಗಿದ್ದವು, ಜೊತೆಗೆ ರಾಜ್ಯ ಸರ್ಕಾರ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ ಭೀಕರ ಕಾಲ್ತುಳಿತ ಉಂಟಾಗಿ 10ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದರು.