ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರ್ಯಾಲಿ ನಡೆಸಿದ ರಾಮಲೀಲಾ ಮೈದಾನದಲ್ಲಿ ‘ಶುದ್ಧೀಕರಣ’ ಯಜ್ಞ ನಡೆಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆಗಸ್ಟ್ 8ರಂದು ಖರ್ಗೆ ಅವರು ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದರು. ಇದಾದ ಬಳಿಕ ಆಗಸ್ಟ್ 10ರಂದು ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ ಸಂಘಟನೆಯ ಸದಸ್ಯರು ಮೈದಾನದಲ್ಲಿ ಶುದ್ಧೀಕರಣ ಯಜ್ಞ ನಡೆಸಿದ್ದಾರೆ.
ಸಂಘಟನೆಯ ಸದಸ್ಯರು, ರಾಮಲೀಲಾ ಮೈದಾನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಿರಬೇಕು. ರಾಜಕೀಯ ಕಾರ್ಯಕ್ರಮ ನಡೆಸಬಾರದು ಎಂದು ಹೇಳಿದ್ದಾರೆ. ರ್ಯಾಲಿ ವೇಳೆ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ. ಆದರೆ ಈ ಘಟನೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್, ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರಾಗಿರುವ ಕಾರಣದಿಂದಲೇ ಮೈದಾನವನ್ನು ‘ಶುದ್ಧೀಕರಿಸಲಾಗಿದೆ’ ಎಂದು ಆರೋಪಿಸಿದ್ದಾರೆ. ಇದು ಜಾತಿ ಆಧಾರಿತ ತಾರತಮ್ಯ ಮತ್ತು ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಘಟನೆ ಕುರಿತು ನೈನಿತಾಲ್ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕು ಮತ್ತು ಕಾನೂನು ಉಲ್ಲಂಘನೆಯಾಗಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಆಧುನಿಕ ಪ್ರಜಾಪ್ರಭುತ್ವ ಭಾರತದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಗೆ ಸ್ಥಾನವಿಲ್ಲ ಎಂದು ಗೋಡಿಯಾಲ್ ಹೇಳಿದ್ದಾರೆ.
ಇತ್ತ ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದೆ. ಶುದ್ಧೀಕರಣ ನಡೆಸಿದ ಸಂಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಮೈದಾನದಲ್ಲಿ ನಡೆದ ಘೋಷಣೆಗಳಿಂದ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ನಡೆದಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಹೀಗಾಗಿ ಖರ್ಗೆ ರ್ಯಾಲಿ ಬಳಿಕ ನಡೆದ ಶುದ್ಧೀಕರಣ ಕಾರ್ಯಕ್ರಮವು ಇದೀಗ ಜಾತಿ ತಾರತಮ್ಯವೇ, ಅಥವಾ ಧಾರ್ಮಿಕ ಸ್ಥಳವನ್ನು ರಾಜಕೀಯ ಕಾರ್ಯಕ್ರಮಕ್ಕೆ ಬಳಸಿದ್ದಕ್ಕೆ ವಿರೋಧವೇ? ಎಂಬ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.