Search


ಇಸ್ಲಾಂ ಜಗತ್ತಿನ ಶ್ರೇಷ್ಠ ಧರ್ಮ; ನಾನು ಹಜ್ ಯಾತ್ರೆ ಹೋಗ್ತೀನಿ ಎಂದ ಸಚಿವ ಬಸವರಾಜ್ ರಾಯರೆಡ್ಡಿ

ಕೊಪ್ಪಳ: ಇಸ್ಲಾಂ ಅತ್ಯಂತ ಶ್ರೇಷ್ಠ ಹಾಗೂ ವೈಜ್ಞಾನಿಕ ಧರ್ಮವಾಗಿದ್ದು, ತಮಗೂ ಪವಿತ್ರ ಮಕ್ಕಾ-ಮದೀನಾ ಹಜ್ ಯಾತ್ರೆಗೆ ತೆರಳುವ ಆಸೆಯಿದೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮುದಾಯದ ಆಚರಣೆಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇಸ್ಲಾಂ ಧರ್ಮ ಅತ್ಯಂತ ಮಾನವೀಯತೆಯಿಂದ ಕೂಡಿದೆ. ಮನುಷ್ಯ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಧರ್ಮ ತಿಳಿಸಿಕೊಡುತ್ತದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು. ಇಸ್ಲಾಂ ಧರ್ಮದ ಬಗ್ಗೆ ಸಮಾಜದಲ್ಲಿ ಕೆಲವು ತಪ್ಪು ಕಲ್ಪನೆಗಳು ಹರಡುತ್ತಿವೆ. ಆದರೆ ಇಸ್ಲಾಂ ಶ್ರೇಷ್ಠ ಧರ್ಮವಾಗಿದ್ದು, ಅದರಲ್ಲಿರುವ ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಹಜ್ ಯಾತ್ರೆಗೆ ತೆರಳುವ ಆಸೆ

ತಮಗೆ ಪವಿತ್ರ ಮಕ್ಕಾಗೆ ತೆರಳಿ ಹಜ್ ಯಾತ್ರೆ ಕೈಗೊಳ್ಳುವ ಆಸೆಯಿದೆ ಎಂದು ರಾಯರೆಡ್ಡಿ ಇದೇ ವೇಳೆ ಹೇಳಿದರು. ಆದರೆ ಹಜ್‌ಗೆ ತೆರಳಲು ಮುಸ್ಲಿಂ ಧರ್ಮದ ಅನುಯಾಯಿಯಾಗಿರಬೇಕು ಎಂದು ಸ್ನೇಹಿತರು ತಿಳಿಸಿದ್ದಾರೆ ಎಂಬುದಾಗಿ ಅವರು ಉಲ್ಲೇಖಿಸಿದರು. ಕುರಾನ್ ಅಧ್ಯಯನದ ಬಗ್ಗೆಯೂ ಮಾತನಾಡಿದ ಅವರು, ಕುರ್‌ಆನ್‌ ಅನ್ನು ಕೇವಲ ಮುಸ್ಲಿಮರು ಮಾತ್ರವಲ್ಲ, ಯಾರೇ ಬೇಕಾದರೂ ಓದಿ ತಿಳಿದುಕೊಳ್ಳಬಹುದು ಎಂದು ಹೇಳಿದರು.

ಮಠ-ಮಂದಿರಗಳು ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ವೈಯಕ್ತಿಕ ನಂಬಿಕೆ ಮತ್ತು ಆಸಕ್ತಿಗೆ ಸಂಬಂಧಿಸಿದ ವಿಚಾರವಾಗಿದೆ. ಎಲ್ಲ ಧರ್ಮಗಳಲ್ಲಿರುವ ಉತ್ತಮ ಮೌಲ್ಯಗಳನ್ನು ಗೌರವಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ರಾಯರೆಡ್ಡಿ ನೀಡಿದರು.

ಕುಕನೂರಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಶಾದಿ ಮಹಲ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡಲಾಗಿದೆ ಎಂದು ಅವರು ತಿಳಿಸಿದರು. ಯಾವುದೇ ಧರ್ಮದವರಿಗೂ ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

By Ravikumar - 30-08-2026


Ads in Post