ಮುಂಬೈ: ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನ ನಿರ್ಮಿಸಲು ಇಸ್ರೇಲ್ ಸರ್ಕಾರ ಮುಂದಾಗಿದ್ದು, ಶಿವಾಜಿ ಮಹಾರಾಜರ ರಾಜ್ಯಭೀಷೇಕ ವಾರ್ಷಿಕೋತ್ಸವ ದಿನದ ಅಂಗವಾಗಿ ಇಸ್ರೇಲ್ ಈ ಘೋಷಣೆ ಮಾಡಿದೆ. ಈ ಕುರಿತು ಮುಂಬೈನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ರಾಯಭಾರಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮಾಹಿತಿ ನೀಡಿದ್ದು, ಅಗತ್ಯ ಸಹಕಾರ ನೀಡುವಂತೆ ಕೋರಿದ್ದಾರೆ. ಇದಕ್ಕೆ ಫಡ್ನವೀಸ್ ಕೂಡ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ಮತ್ತು ಇಸ್ರೇಲ್ ಸ್ನೇಹದ ಸಂಕೇತ...!
ಫಡ್ನವಿಸ್ ಅವರಿಗೆ ಬರೆದ ಪತ್ರದಲ್ಲಿ ಇಸ್ರೇಲ್ ರಾಯಭಾರಿ ರೇವಾಚ್ ಅವರು, "ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸುವುದು ಭಾರತ ಮತ್ತು ಇಸ್ರೇಲ್ ನಡುವಿನ ಗಾಢ ಸ್ನೇಹದ ಸಂಕೇತವಾಗಲಿದೆ. ಮಹಾರಾಷ್ಟ್ರ ಮತ್ತು ಭಾರತೀಯ ಯಹೂದಿ ಸಮುದಾಯದ ನಡುವಿನ ಐತಿಹಾಸಿಕ ಸಂಬಂಧಗಳನ್ನು ಗಮನಿಸಿದರೆ, ಈ ಸ್ಮಾರಕವು ಇನ್ನಷ್ಟು ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ. ಇಂದಿಗೂ ಆ ಸಮುದಾಯದ ಅನೇಕ ವಂಶಸ್ಥರು ಇಸ್ರೇಲ್ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.
ಜೊತೆಗೆ "ಈ ಮಹತ್ವದ ಯೋಜನೆಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲ ಮತ್ತು ಮಾರ್ಗದರ್ಶನವನ್ನು ನಾನು ವಿನಂತಿಸುತ್ತೇನೆ. ಐತಿಹಾಸಿಕ ಉಲ್ಲೇಖಗಳು, ಕಲಾತ್ಮಕ ಸಲಹೆಗಳು, ವಿನ್ಯಾಸ ಹಾಗೂ ಇತರ ಅಗತ್ಯ ಸಹಾಯಗಳಿಗಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಸಹಕರಿಸಲು ನಾವು ಬಯಸುತ್ತೇವೆ. ಮುಂದಿನ ಹಂತದಲ್ಲಿ ಇದನ್ನು ಜನರ ಯೋಜನೆಯಾಗಿಯೂ ರೂಪಿಸಬಹುದು. ಈ ಉಪಕ್ರಮವು ನಮ್ಮ ಎರಡೂ ಜನಾಂಗಗಳ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಧೈರ್ಯ, ನಾಯಕತ್ವ ಮತ್ತು ಪರಸ್ಪರ ಗೌರವ ಹಂಚಿಕೊಂಡ ಮೌಲ್ಯಗಳಿಗೆ ಶಾಶ್ವತ ಗೌರವ ಸಲ್ಲಿಸಲಿದೆ ಎಂಬ ವಿಶ್ವಾಸ ನನಗಿದೆ" ಎಂದು ತಿಳಿಸಿದ್ದಾರೆ.
ಶಿವಾಜಿ ಮಹಾರಾಜರು ಅಸಾಧಾರಣ ನಾಯಕರು...!
ಶಿವಾಜಿ ಮಹಾರಾಜರ ಬಗ್ಗೆ ಪತ್ರದಲ್ಲಿ ಬರೆದಿರುವ ರೇವಾಚ್, "ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಐತಿಹಾಸಿಕ ಇಸ್ರೇಲ್ ಭೇಟಿಯ ನಂತರ, ಎರಡು ದೇಶಗಳ ಜನರನ್ನು ಇನ್ನಷ್ಟು ಹತ್ತಿರಕ್ಕೆ ತರಲು ಇಸ್ರೇಲ್ ಸರ್ಕಾರ ವಿಶೇಷ ಪ್ರಯತ್ನಗಳನ್ನು ಆರಂಭಿಸಿತು. ಮುಂಬೈಗೆ ಬಂದ ನಂತರ ನಾನು ಮರಾಠ ಸಾಮ್ರಾಜ್ಯದ ಇತಿಹಾಸವನ್ನು ಅಧ್ಯಯನ ಮಾಡತೊಡಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮರಾಠ ಸಾಮ್ರಾಜ್ಯದ ಸ್ಥಾಪಕರಷ್ಟೇ ಅಲ್ಲ, ಉತ್ತಮ ಆಡಳಿತ, ಧೈರ್ಯ, ಧಾರ್ಮಿಕ ಸಹಿಷ್ಣುತೆ, ನೌಕಾಪಡೆ ಬಲವರ್ಧನೆ ಮತ್ತು ಪ್ರಜೆಗಳ ರಕ್ಷಣೆಯ ದೃಷ್ಟಿಕೋನ ಹೊಂದಿದ್ದ ಅಸಾಧಾರಣ ನಾಯಕರು. ಅವರ ಶೌರ್ಯ ಮತ್ತು ನಾಯಕತ್ವ ಭಾರತದೆಲ್ಲೆಡೆ ಜನರನ್ನು ಪ್ರೇರೇಪಿಸಿದೆ" ಎಂದು ಹೇಳಿದ್ದಾರೆ.
"ನಾನು ಭಾರತದಲ್ಲಿ ಎಲ್ಲಿಗೆ ಹೋದರೂ ಇಸ್ರೇಲ್ ಹಾಗೂ ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಜನರ ಕಣ್ಣಲ್ಲಿ ಅಪಾರ ಗೌರವವನ್ನು ಕಾಣುತ್ತೇನೆ. ಅದೇ ರೀತಿ, ಇಸ್ರೇಲ್‌ನಲ್ಲಿಯೂ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ಈ ಸ್ನೇಹದ ಮನೋಭಾವದೊಂದಿಗೆ, ಮುಂಬೈಯಲ್ಲಿರುವ ಇಸ್ರೇಲ್ ಮಹಾವಾಣಿಜ್ಯ ದೂತಾವಾಸವು ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಲು ತೀರ್ಮಾನಿಸಿದೆ" ಎಂದು ರೇವಾಚ್ ತಿಳಿಸಿದ್ದಾರೆ.