ನಾಗ್ಪುರ: ಮೋದಿ ಸರ್ಕಾರ ಶೀಘ್ರದಲ್ಲೇ ತನ್ನ ಸಚಿವ ಸಂಪುಟ ವಿಸ್ತರಣೆ ಮಾಡುತ್ತದೆ ಎಂಬ ವದಂತಿಯ ನಡುವೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದಾರೆ, ʻನಾನು ಈಗ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗ್ತಿಲ್ಲ, ಈಗ ಜವಬ್ದಾರಿಯನ್ನ ಹೊಸ ಪೀಳಿಗೆಗೆ ವರ್ಗಾಯಿಸುವ ಸಮಯ ಹತ್ತಿರವಾಗಿದೆ ಎಂದು ಹೇಳಿದ್ದಾರೆ. ಗಡ್ಕರಿಯವರ ಈ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲೂ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ʻಸಾರ್ವಜನಿಕ ಕೆಲಸಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆ ಇತ್ತೀಚೆಗೆ ಕಡಿಮೆಯಾಗಿದೆ. ಕೆಲಸವನ್ನು ಹೊಸ ಪೀಳಿಗೆಗೆ ವಹಿಸಿಕೊಡಬೇಕು. ಹೊಸ ತಲೆಮಾರು ಬಂದಿದೆ. ಅವರಿಗೆ ಹಳೆಯ ತಲೆಮಾರು ಮಾರ್ಗದರ್ಶನ ನೀಡುತ್ತಿದೆ. ಕಳೆದ 30 ವರ್ಷಗಳಿಂದ ನಾನು ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ, ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದೇನೆ. ಆದರೆ ಈಗ ಮೊದಲಿನಷ್ಟು ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ, ಹೀಗಾಗಿ ಹೊಸ ಪೀಳಿಗೆಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.
ಸಧ್ಯ ರಾಷ್ಟ್ರ ಬಿಜೆಪಿಯಲ್ಲಿ ಭಾರೀ ಬದಲಾವಣೆಯಾಗುತ್ತಿದೆ, ನಿತಿನ್ ನಬಿನ್ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅನೇಕ ಆಡಳಿತಾತ್ಮಕ ಬದಲಾವಣೆಯನ್ನ ಮಾಡಿದ್ದು, ರಾಷ್ಟ್ರಮಟ್ಟದಲ್ಲೂ ಅನೇಕ ಬದಲಾವಣೆಗಳಿಗೆ ಕೈ ಹಾಕಿದ್ದಾರೆ, ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಪ್ರಕಟವಾದ 65 ಸದಸ್ಯರ ರಾಷ್ಟ್ರೀಯ ತಂಡದಲ್ಲಿ 51 ಹೊಸ ಮುಖಗಳಿಗೆ ಸ್ಥಾನ ನೀಡಲಾಗಿದ್ದು, ಇದು ಬಿಜೆಪಿಯಲ್ಲಿ ನಡೆಯುತ್ತಿರುವ ತಲೆಮಾರು ಬದಲಾವಣೆಯ ಸ್ಪಷ್ಟ ಸಂಕೇತವಾಗಿದೆ.