Search


ಪಂಚ ಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಜಾನಕಮ್ಮ; ಮೊಮ್ಮಗಳ ಕೈಯಿಂದ ಅಗ್ನಿ ಸ್ಪರ್ಶ

ಮೈಸೂರು: ಗಾನಕೋಗಿಲೆ ಎಸ್ ಜಾನಕಮ್ಮ ಪಂಚ ಭೂತಗಲಲ್ಲಿ ಲೀನರಾಗಿದ್ದಾರೆ. ದಶಕಗಳ ಕಾಲ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದರೂ ಕನ್ನಡ ನೆಲೆದಲ್ಲೇ ಬಹುಭಾಷಾ ಹಿರಿಯ ಗಾಯಕಿ, ಗಾನ ಕೋಗಿಲೆ ಎಸ್. ಜಾನಕಿ ಲೀನರಾಗಿದ್ದಾರೆ. ಅವರ ಆಸೆಯಂತೆಯೇ ಎಚ್.ಡಿ. ಕೋಟೆ ರಸ್ತೆಯ ಕಣಿಯನಹುಂಡಿಯಲ್ಲಿರುವ ಸಾಕುಮಗ ನವೀನ್‌ ಅವರ ‘ನವೀನ್ ಫಾರ್ಮ್ ಹೌಸ್’ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಭಾನುವಾರ ನೆರವೇರಿತು.

ಜಾನಕಿ ಅವರ ಏಕೈಕ ಪುತ್ರ ಕಳೆದ ಜನವರಿಯಲ್ಲಿ ನಿಧನರಾಗಿದ್ದರಿಂದ, ಅವರ ಮೊಮ್ಮಗಳು ಅಪ್ಸರಾ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಹಾಗೂ ಶಾಶ್ವತಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಮೈಸೂರು ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಗೌರವವನ್ನು ಸಲ್ಲಿಸುವ ಮೂಲಕ ಗಾನಕೋಗಿಲೆಗೆ ಭಾವಪೂರ್ಣ ವಿದಾಯ ಹೇಳಲಾಯಿತು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ನಾದ ಬ್ರಹ್ಮ ಹಂಸಲೇಖ, ಹಿರಿಯ ನಟಿ ಜಯಮಾಲಾ ಸೇರಿದಂತೆ ನೆರೆಯ ಕೇರಳಂ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಅಭಿಮಾನಿಗಳು, ಚಿತ್ರರಂಗದ ಕಲಾವಿದರು, ಸಂಗೀತ ನಿರ್ದೇಶಕರು, ಒಡನಾಡಿಗಳು ಬಂದು ಅಂತಿಮ ದರ್ಶನ ಪಡೆದರು.

ಇದೇ ವೇಳೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುವಂತೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಸ್. ಜಾನಕಿ ಅಧ್ಯಯನ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ಜಯಮಾಲಾ ಆಗ್ರಹಿಸಿದರು

By Ravikumar - 12-07-2026


Ads in Post