ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಬಿರುಕು ಮೂಡುತ್ತಿದೆಯೇ ಎಂಬ ಚರ್ಚೆ ತೀವ್ರಗೊಂಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶಕ್ಕೆ ಸಿದ್ದರಾಮಯ್ಯ ಅವರ ಆಪ್ತರಾದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಹಿರಿಯ ನಾಯಕ ಡಾ. ಎಚ್.ಸಿ. ಮಹದೇವಪ್ಪ ಗೈರಾಗಿರುವುದು ಹಲವು ರಾಜಕೀಯ ಪ್ರಶ್ನೆಗಳಿಗೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ರಜತ ಮಹೋತ್ಸವ ಹಾಗೂ ಜನಜಾಗೃತಿ ಸಮಾವೇಶದಲ್ಲಿ ಅಹಿಂದ ಚಳವಳಿಯ ಪ್ರಮುಖ ರೂವಾರಿಗಳೆಂದೇ ಗುರುತಿಸಿಕೊಂಡಿರುವ ಈ ಇಬ್ಬರು ನಾಯಕರು ಕಾಣಿಸಿಕೊಳ್ಳದಿರುವುದು ಕುತೂಹಲ ಮೂಡಿಸಿದೆ. 2005ರಲ್ಲಿ ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರನ್ನು ಒಗ್ಗೂಡಿಸಿ ಅಹಿಂದ ಚಳವಳಿಯನ್ನು ಬಲಪಡಿಸುವಲ್ಲಿ ಸತೀಶ್ ಜಾರಕಿಹೊಳಿ ಮತ್ತು ಎಚ್.ಸಿ. ಮಹದೇವಪ್ಪ ಮಹತ್ವದ ಪಾತ್ರ ವಹಿಸಿದ್ದರು.
ಹಳೆ ಮೈಸೂರು ಭಾಗದಲ್ಲಿ ಮಹದೇವಪ್ಪ ಹಾಗೂ ಮುಂಬೈ-ಕರ್ನಾಟಕ ಭಾಗದಲ್ಲಿ ಸತೀಶ್ ಜಾರಕಿಹೊಳಿ ಅವರು ಅಹಿಂದ ಚಳವಳಿಯನ್ನು ವಿಸ್ತರಿಸುವ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯನ್ನು ಬಲಪಡಿಸಿದ್ದರು. ಆದರೆ, ಬೆಂಗಳೂರಿನಲ್ಲಿ ನಡೆದ ಅಹಿಂದ ರಜತ ಮಹೋತ್ಸವ ಸಮಾವೇಶಕ್ಕೆ ಚಳವಳಿಯ ಮೂಲ ರೂವಾರಿಗಳಿಗೇ ಆಹ್ವಾನ ನೀಡಿಲ್ಲ ಎಂಬ ಆರೋಪ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, “ನನಗೆ ಸಮಾವೇಶಕ್ಕೆ ಯಾವುದೇ ಆಹ್ವಾನ ಬಂದಿರಲಿಲ್ಲ. ಹೀಗಾಗಿ ನಾನು ಭಾಗವಹಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಎಚ್.ಸಿ. ಮಹದೇವಪ್ಪ ಕೂಡ ಅಹಿಂದ ಚಳವಳಿಯ ಕುರಿತು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದು, “ಅಹಿಂದ ಒಬ್ಬರಿಂದಲೇ ಆಗಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಮೊದಲ ಅಹಿಂದ ಸಮಾವೇಶದ ರೂಪುರೇಷೆಯನ್ನು ನಾನೇ ಸಿದ್ಧಪಡಿಸಿದ್ದೆ” ಎಂದು ಹೇಳಿದ್ದಾರೆ.
“ಕೇವಲ ಭಾಷಣ ಮಾಡಿ ಹೋಗುವುದರಿಂದ ಅಥವಾ ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದರಿಂದ ನಾಯಕತ್ವ ಬೆಳೆಯುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಚಳವಳಿಯನ್ನು ಬದ್ಧತೆಯಿಂದ ಮುನ್ನಡೆಸುವುದು ಮುಖ್ಯ. ದೇಶವನ್ನು ಹೇಗೆ ಕಟ್ಟಬೇಕು ಎಂಬ ಚಿಂತನೆ ಇರಬೇಕು. ಯಾರಿಗೆ ಬದ್ಧತೆ ಇರುತ್ತದೆಯೋ ಅವರು ಚಳವಳಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆ” ಎಂದು ಮಹದೇವಪ್ಪ ತಿಳಿಸಿದ್ದಾರೆ. ಅಹಿಂದ ಚಳವಳಿಯ ಪ್ರಮುಖ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ಎಚ್.ಸಿ. ಮಹದೇವಪ್ಪ ಅವರ ಗೈರುಹಾಜರಿ ಹಾಗೂ ಅವರ ಹೇಳಿಕೆಗಳು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ.