ಮೈಸೂರು: ಮೈಸೂರು ದಸರಾ (Mysuru Dasara) ಖಾಸಗಿ ದರ್ಬಾರ್ ಬಗ್ಗೆ ರಾಜಮನೆತನದ ಪ್ರಮೋದದೇವಿ ಒಡೆಯರ್ (Pramoda Devi Wadiyar) ಅವರು ಮಾಹಿತಿ ನೀಡಿದ್ದಾರೆ. ಅ.5 ರಂದು ಸಿಂಹಾಸನ ಜೋಡಣೆ ಮಾಡಲಾಗುತ್ತದೆ. ಅಕ್ಟೊಬರ್ 11ರ 11:45ಕ್ಕೆ ಖಾಸಗಿ ದರ್ಬಾರ್ ಆರಂಭವಾಗಲಿದೆ. ಅ.16 ರಂದು ಸರಸ್ವತಿ ಪೂಜೆ ನೆರವೇರಲಿದೆ. ಅ.20ರ ಬೆಳಗ್ಗೆ 11:35ಕ್ಕೆ ಆಯುಧ ಪೂಜೆ ನಡೆಯಲಿದೆ. ಅ.21 ರಂದು ಬೆಳಗ್ಗೆ 8:15ಕ್ಕೆ ವಿಜಯದಶಮಿ ಮೆರವಣಿಗೆ ನೆರವೇರಲಿದೆ ಎಂದು ತಿಳಿಸಿದ್ದಾರೆ
ದಸರಾದಲ್ಲಿ ಕಂಬಳ ಆಯೋಜಿಸುವ ಅಗತ್ಯವಿಲ್ಲ
ದಸರಾದಲ್ಲಿ ಕಂಬಳ ನಡೆಸುವ ಅಗತ್ಯವಿರಲಿಲ್ಲ. ದಸರಾ ಮುಗಿದ ಬಳಿಕ ಪ್ರತ್ಯೇಕವಾಗಿ ಕಂಬಳೋತ್ಸವ ಆಯೋಜಿಸಬಹುದಿತ್ತು. ದಸರಾ ಸಂದರ್ಭದಲ್ಲಿ ಕಂಬಳ ನಡೆಸುವುದರಿಂದ ಕಂಬಳಕ್ಕೆ ಅದರದೇ ಆದ ಪ್ರಾಮುಖ್ಯತೆ ಸಿಗುವುದಿಲ್ಲ. ಕಂಬಳಕ್ಕೆ ತನ್ನದೇ ಆದ ವೈಶಿಷ್ಟ್ಯವಿದ್ದು, ಅದನ್ನು ನಾವು ಕಾಪಾಡಿಕೊಳ್ಳಬೇಕು. ಸರ್ಕಾರ ಈ ಬಗ್ಗೆ ನನ್ನ ಅಭಿಪ್ರಾಯ ಕೇಳಿಲ್ಲ, ಕೇಳಿದರೆ ಇದೇ ಅಭಿಪ್ರಾಯವನ್ನು ತಿಳಿಸುತ್ತೇನೆ. ಕೇರಳದಲ್ಲಿ ಪ್ರತ್ಯೇಕ ಉತ್ಸವಗಳಿವೆ, ಮಂಗಳೂರಿನಲ್ಲೂ ಮತ್ತೊಂದು ಉತ್ಸವ ನಡೆಯುತ್ತದೆ. ಪ್ರತಿಯೊಂದು ಆಚರಣೆಗೂ ತನ್ನದೇ ಆದ ವೈಶಿಷ್ಟ್ಯವಿದೆ. ದಸರಾ ಎಂದರೆ ಅದ್ಧೂರಿಯ ಆಚರಣೆ ಎಂದು ಅವರು ಹೇಳಿದರು. ಅಕ್ಕಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳನ್ನು ದಸರಾಗೆ ಆಹ್ವಾನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ದಸರಾಗೆ ಎಲ್ಲರನ್ನೂ ಕರೆಯಬೇಕು. ಇದು ಮನೆಯ ಹಬ್ಬದಂತಿದ್ದು, ಎಲ್ಲರೂ ಭಾಗವಹಿಸಬೇಕು ಎಂದರು.
ರಾಜಮನೆತನದ ವಿರುದ್ಧ ಇರುವ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇನ್ನೂ ಲೆಕ್ಕಕ್ಕೆ ಸಿಗದಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅವುಗಳ ಸಂಖ್ಯೆಯನ್ನು ಎಣಿಸಲು ಸಾಧ್ಯವಾಗದಷ್ಟು ಪ್ರಕರಣಗಳಿವೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಬದುಕಿದ್ದ ಸಂದರ್ಭದಲ್ಲಿ ಎಷ್ಟು ಪ್ರಕರಣಗಳು ಇದ್ದವೋ, ಈಗಲೂ ಅಷ್ಟೇ ಪ್ರಕರಣಗಳು ಮುಂದುವರಿದಿವೆ ಎಂದು ಅವರು ಹೇಳಿದರು.
ದಸರಾ ಟಿಕೆಟ್
ಇಂದಿನಿಂದ (ಸೆ.21) ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಆನ್ಲೈನ್ನಲ್ಲಿ ಮಾರಾಟ ಆರಂಭವಾಗಿದೆ. ಒಂದು ಗೋಲ್ಡ್ ಕಾರ್ಡ್, ಒಂದು ಟಿಕೆಟ್ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರಲಿದೆ. ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಪ್ರವೇಶ ಇರಲಿದೆ https://www.mysoredasara.gov.in/ & ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ