ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರ ಮತ್ತೆ ಕಾವೇರಿರುವ ಬೆನ್ನಲ್ಲೇ ಕರ್ನಾಟಕ ಬಂದ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಇದೆ ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ ಮಾಡ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದಕ್ಕೆ ರಾಜ್ಯದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇದೆ ಎಂದು ಆರೋಪಿಸಿರುವ ಹೋರಾಟಗಾರರು, ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ನೀರು ಬಿಡಬಾರದು ಎಂದು ಆಗ್ರಹಿಸುತ್ತಿದ್ದಾರೆ.
ಇದೇ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಒಗ್ಗೂಡಿ ರಾಜ್ಯಾದ್ಯಂತ ಬಂದ್ ನಡೆಸಲು ತೀರ್ಮಾನಿಸಿವೆ. ಆಗಸ್ಟ್ 13ರಂದು ನಡೆಯಲಿರುವ ಬಂದ್ಗೆ ವಿವಿಧ ಸಂಘಟನೆಗಳ ಬೆಂಬಲ ಪಡೆಯಲು ಮುಂದಾಗಲಾಗಿದೆ. ಹೋಟೆಲ್, ಆಟೋ ಸೇರಿದಂತೆ ಹಲವು ವಲಯಗಳ ಸಂಘಟನೆಗಳು ಬೆಂಬಲ ಸೂಚಿಸಿರುವುದಾಗಿ ವರದಿಯಾಗಿದೆ.
ಕಾವೇರಿ ನೀರು ವಿಚಾರವೇ ಪ್ರಮುಖ ಅಸ್ತ್ರ
ತಮಿಳುನಾಡಿಗೆ ನೀರು ಹರಿಸುವ CWRC ನಿರ್ದೇಶನದ ಹಿನ್ನೆಲೆಯಲ್ಲಿ ಮಂಡ್ಯ ಮತ್ತು ಮೈಸೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಈಗಾಗಲೇ ಪ್ರತಿಭಟನೆಗಳು ನಡೆದಿವೆ. ರೈತರು ಹಾಗೂ ಕನ್ನಡಪರ ಸಂಘಟನೆಗಳು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿವೆ. ವಾಟಾಳ್ ನಾಗರಾಜ್ ಕೂಡ ಕಾವೇರಿ ನೀರು ಬಿಡುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದು, ಬರದ ಪರಿಸ್ಥಿತಿಯಲ್ಲಿ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆಗಸ್ಟ್ 13ರಂದು ಏನಾಗಲಿದೆ?
ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಂದ್ನ ಸ್ವರೂಪ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಅಂಗಡಿ-ಮುಂಗಟ್ಟುಗಳು, ಹೋಟೆಲ್ಗಳು, ಆಟೋ ಸೇರಿದಂತೆ ವಿವಿಧ ಸೇವೆಗಳು ಬಂದ್ಗೆ ಬೆಂಬಲ ನೀಡಿದರೆ ಸಾರ್ವಜನಿಕ ಸಾರಿಗೆ ಮತ್ತು ದೈನಂದಿನ ಜನಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಬಂದ್ಗೆ ಇನ್ನಷ್ಟು ಸಂಘಟನೆಗಳು ಬೆಂಬಲ ನೀಡುವ ನಿರೀಕ್ಷೆಯಿದ್ದು, ಮುಂದಿನ ದಿನಗಳಲ್ಲಿ ಬಂದ್ನ ರೂಪುರೇಷೆ ಹಾಗೂ ಯಾವೆಲ್ಲಾ ಸಂಘಟನೆಗಳು ಅಧಿಕೃತವಾಗಿ ಕೈಜೋಡಿಸಲಿವೆ ಎಂಬುದು ಸ್ಪಷ್ಟವಾಗಲಿದೆ.