Search


ಕೂಲಿ ಕಾರ್ಮಿಕರ ಜೊತೆ ಇಡ್ಲಿ ಸೇವಿಸಿದ ಸಿಎಂ ಡಿಕೆಶಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಮುಂಜಾನೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗ್ಗೆ ಸುಮಾರು 7 ಗಂಟೆಗೆ ಮಾರುಕಟ್ಟೆಗೆ ಆಗಮಿಸಿದ ಅವರು, ಈರುಳ್ಳಿ ಮಂಡಿಗೆ ಭೇಟಿ ನೀಡಿ ಅಲ್ಲಿನ ರೈತರು, ವರ್ತಕರು ಹಾಗೂ ಕೂಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

ಪರಿಶೀಲನೆಯ ವೇಳೆ ಡಿ.ಕೆ. ಶಿವಕುಮಾರ್ ಅವರು ರಸ್ತೆ ಬದಿಯ ಸಣ್ಣ ಪೆಟ್ಟಿಗೆ ಹೋಟೆಲ್‌ಗೆ ತೆರಳಿ ಕೂಲಿ ಕಾರ್ಮಿಕರೊಂದಿಗೆ ಕುಳಿತು ಉಪಹಾರ ಸೇವಿಸಿದರು. ಕಾರ್ಮಿಕರ ಜೊತೆಯಲ್ಲೇ ಇಡ್ಲಿ ಸೇವಿಸಿದ ಅವರು, ತಮ್ಮೊಂದಿಗೆ ಉಪಹಾರ ಸೇವಿಸಿದ್ದ ಕೂಲಿಕಾರರ ಬಿಲ್‌ನ್ನೂ ಪಾವತಿಸಲು ಮುಂದಾದರು. ಹೋಟೆಲ್ ಮಾಲೀಕರಿಗೆ 500 ರೂ. ನೀಡಿದ ಡಿ.ಕೆ. ಶಿವಕುಮಾರ್, ತಮ್ಮೊಂದಿಗೆ ಕುಳಿತಿದ್ದ ಕಾರ್ಮಿಕರಿಂದ ಉಪಹಾರದ ಹಣ ಪಡೆಯಬಾರದು ಎಂದು ಸೂಚಿಸಿದರು. ಡಿಕೆಶಿ ಅವರ ಈ ಸರಳ ನಡೆ ಮಾರುಕಟ್ಟೆಯಲ್ಲಿದ್ದವರ ಗಮನ ಸೆಳೆಯಿತು.

ಇದೇ ವೇಳೆ ಎಪಿಎಂಸಿಯಲ್ಲಿರುವ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ರೈತರು ಮಾಹಿತಿ ನೀಡಿದರು. ಮಾರುಕಟ್ಟೆಯಲ್ಲಿ ರೈತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ, ಒಂದು ಬಾಟಲಿ ನೀರಿಗಾಗಿ 20 ರೂ. ನೀಡಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯ ಬಗ್ಗೆಯೂ ಚರ್ಚೆ ನಡೆಯಿತು.

ರೈತರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಮಾರುಕಟ್ಟೆಯಲ್ಲಿ ಹಿಂದಿನ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ ಲೂಟಿ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತು. ಈ ಕುರಿತು ತಮ್ಮ ಬಳಿ ಇರುವ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಲಾಯಿತು. ಎಪಿಎಂಸಿ ಮಾರುಕಟ್ಟೆಯ ಸಮಸ್ಯೆಗಳನ್ನು ಪರಿಶೀಲಿಸಿದ ಡಿ.ಕೆ. ಶಿವಕುಮಾರ್, ರೈತರು ಹಾಗೂ ಕಾರ್ಮಿಕರ ಅಹವಾಲುಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

By Ravikumar - 08-09-2026


Ads in Post