Search


ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡೋದು ಖಚಿತ...!

ನವದೆಹಲಿ: ರಾಜ್ಯದಲ್ಲಿ ಕಳೆದ ಅನೇಕ ದಿನಗಳಿಂದ ಚರ್ಚೆಯಾಗುತ್ತಿದ್ದ ನಾಯಕತ್ವ ಬದಲಾವಣೆ ಪ್ರಶ್ನೆಗೆ ಕಡೆಗೂ ಹೈಕಮಾಂಡ್‌ ಉತ್ತರ ಕಂಡುಕೊಂಡಿದೆ. ದೆಹಲಿಯಲ್ಲಿ ನಡೆದ ಸುಮಾರು 6 ಗಂಟೆಗಳ ಸುದೀರ್ಘ ಮ್ಯಾರಾಥಾನ್ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ  ರಾಜ್ಯಸಭೆ ಆಫರ್ ನೀಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಆಫರ್ ನೀಡಿದ್ದಾರೆ. ಇದಕ್ಕೆ ಯಾವುದೇ ಸಮ್ಮತಿ ಸೂಚಿಸದ ಸಿದ್ದರಾಮಯ್ಯ, ಸಭೆ ಬಳಿಕ ನೇರವಾಗಿ ಜಾರ್ಜ್​​​ ನಿವಾಸದಲ್ಲಿದ್ದ ಆಪ್ತ ಸಚಿವರು, ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯು ತೀವ್ರ ಕುತೂಹಲ ಮೂಡಿಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿದರು. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಪ್ರತ್ಯೇಕ ಸಭೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಚುನಾವಣೆಗಳನ್ನು ಎದುರಿಸಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ವೇಳೆ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ರಾಜ್ಯಸಭಾ ಸ್ಥಾನದ ಆಫರ್ ಹಾಗೂ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೊಸದಾಗಿ ರಚನೆಯಾಗಲಿರುವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಪಟ್ಟ ನೀಡುವ ಆಫರ್ ಅನ್ನು ಹೈಕಮಾಂಡ್ ಮುಂದಿಟ್ಟಿದೆ ಎನ್ನಲಾಗಿದೆ. ಇನ್ನೊಂದೆಡೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂದು ಆಪ್ತರು ಸಿದ್ದರಾಮಯ್ಯಗೆ ಸಲಹೆ ನೀಡಿದ್ದು, ನಿಮ್ಮ ಪರವಾಗಿ ನಾವೇ ರಾಹುಲ್​ ಗಾಂಧಿ ಬಳಿ ಮಾತನಾಡುತ್ತೇವೆ ಎಂದಿದ್ದಾರೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ, ಇಲ್ಲ, ನಾನು ರಾಹುಲ್​ ಗಾಂಧಿಯವರನ್ನ ನಿರಾಕರಿಸಲು ಸಾಧ್ಯವಿಲ್ಲ. ನಾನು ರಾಜೀನಾಮೆ ಕೊಡುತ್ತೇನೆ, ನೀವು ಬೇಕಾದ್ರೆ ಹೋಗಿ ಮಾತಾಡಿ ಎಂದಿದ್ದಾರೆ ಎಂದು ತಿಳಿದುಬಂದಿದೆ.

By thebigbulletin.com - 27-05-2026


Ads in Post