Search


ಕಾಶ್ಮೀರ ಭಾರತದ ಮುಖ್ಯ ಭೂಭಾಗ; ಅಮೆರಿಕಾ ರಾಯಭಾರಿ ಮಹತ್ವದ ಹೇಳಿಕೆ

ಶ್ರೀನಗರ: ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾಶ್ಮೀರವನ್ನ ʻಭಾರತದ ಪ್ರಮುಖ ಭಾಗʼ ಎಂದು ಬಣ್ಣಿಸಿದ್ದು, ಕಾಶ್ಮೀರ ಅತ್ಯಂತ ಸುಂದರ ಪ್ರದೇಶ, ಈ ಪ್ರದೇಶಕ್ಕೆ ಅಮೆರಿಕನ್ನರೂ ಭೇಟಿ ನೀಡಿ, ಇಲ್ಲಿನ ಸೌಂದರ್ಯವನ್ನ ಇಷ್ಟಪಡುತ್ತಾರೆ ಎಂದು ಹೇಳಿದರು.

ಕಾಶ್ಮೀರ ಭೇಟಿ ವೇಳೆ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾರನ್ನ ಭೇಟಿಯಾಗಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸೆರ್ಗಿಯೋ ಗೋರ್‌ “ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ಜಮ್ಮು ಕಾಶ್ಮೀರ ಭಾರತದ ಪ್ರಮುಖ ಭಾಗವಾಗಿದೆ. ನಾನು ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಇದೊಂದು ಅತ್ಯಂತ ಸುಂದರವಾದ ಸ್ಥಳ. ಈ ಸ್ಥಳವನ್ನು ವೀಕ್ಷಿಸಲು ನಾನು ರೋಮಾಂಚನಗೊಂಡಿದ್ದೇನೆ. ನಾವೀಗಷ್ಟೇ ಸಿಎಂ ಜೊತೆ ಸಭೆಯನ್ನು ನಡೆಸಿದ್ದೇವೆ. ಕೆಲವು ವಿಷಯಗಳ ಮುಂದುವರಿದ ಭಾಗವಾಗಿ, ನಾವು ಅವುಗಳನ್ನು ವಾಷಿಂಗ್ಟನ್ ಮತ್ತು ದೆಹಲಿಗೆ ಕೊಂಡೊಯ್ಯಲು ಆಶಿಸುತ್ತೇವೆ” ಎಂದು ಅಮೆರಿಕ ರಾಯಭಾರಿ ಹೇಳಿದ್ದಾರೆ.

ಜೊತೆಗೆ ಅಮೆರಿಕಾ ಪ್ರಜೆಗಳಿಗೆ ಜಮ್ಮು ಕಾಶ್ಮೀರದ ಬಗ್ಗೆ ನೀಡಿರುವ ಪ್ರವಾಸಿ ಸಲಹೆಗಳನ್ನ ಮರುಪರಿಶೀಲಿಸುತ್ತೇವೆ ಎಂದು ಸೆರ್ಗಿಯೋ ಗೋರ್‌ ತಿಳಿಸಿದ್ದಾರೆ, ಹಾಗೆ ಈ ಪ್ರದೇಶದಲ್ಲಿ ಭದ್ರತಾ ವಾತಾವರಣವನ್ನು ಸುಧಾರಿಸಲು ಮತ್ತು ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಸರ್ಕಾರಗಳು ಕೈಗೊಂಡಿರುವ ಕ್ರಮಗಳನ್ನು ಅಮೆರಿಕ ರಾಯಭಾರಿ ಮುಕ್ತಕಂಠದಿಂದ ಶ್ಲಾಘಿಸಿದರು. “ನವದೆಹಲಿಯ ಕೇಂದ್ರ ಸರ್ಕಾರ, ಇಲ್ಲಿನ ಮುಖ್ಯಮಂತ್ರಿ ಹಾಗೂ ಸ್ಥಳೀಯ ಸರ್ಕಾರವು ಈ ಪ್ರದೇಶವನ್ನು ಸುರಕ್ಷಿತವಾಗಿಡಲು ಮತ್ತು ಇನ್ನಷ್ಟು ಭದ್ರಗೊಳಿಸಲು ಮಹತ್ವದ ಕ್ರಮಗಳನ್ನು ಕೈಗೊಂಡಿವೆ. ಆದ್ದರಿಂದ, ಅಮೆರಿಕ ಸರ್ಕಾರವು ತನ್ನ ಪ್ರಜೆಗಳಿಗೆ ವಿಧಿಸಿರುವ ಹಾಗೂ ಶಿಫಾರಸು ಮಾಡಿರುವ ಪ್ರವಾಸಿ ಸಲಹೆಯನ್ನು ಸಡಿಲಗೊಳಿಸಬೇಕೇ ಎಂಬುದನ್ನು ನಾವು ಮರುಪರಿಶೀಲಿಸಲಿದ್ದೇವೆ” ಎಂದು ಅವರು ತಿಳಿಸಿದರು.

ಅಮೆರಿಕದ ರಾಯಭಾರಿಯೊಂದಿಗಿನ ಭೇಟಿಯ ಕುರಿತು ಮಾತನಾಡಿದ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ, ಭಾರತ-ಅಮೆರಿಕ ಸಂಬಂಧಗಳ ಜೊತೆಗೆ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಅಮೆರಿಕ ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು. “ಈ ಸಭೆಯು ಅತ್ಯುತ್ತಮವಾಗಿತ್ತು. ನಮ್ಮೆರಡು ದೇಶಗಳ ನಡುವಿನ ಬಾಂಧವ್ಯದ ಜೊತೆಗೆ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಮೆರಿಕ ಏನು ಮಾಡಲು ಸಾಧ್ಯ ಎಂಬುದರ ಕುರಿತು ಚರ್ಚಿಸಲು ನಮಗೆ ಅವಕಾಶ ಸಿಕ್ಕಿತು” ಎಂದು ಸಿಎಂ ಹೇಳಿದ್ದಾರೆ.

By Ravikumar - 20-08-2026


Ads in Post