ನವದೆಹಲಿ: E20 ಪೆಟ್ರೋಲ್ ನೀತಿ ವಿರೋಧಿಸಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಾಗೂ ಹಿರಿಯ ನಾಯಕ ಮನೀಶ್ ಸಿಸೋಡಿಯಾ ನೇತೃತ್ವದಲ್ಲಿ ದೆಹಲಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದತ್ತ ಮೆರವಣಿಗೆ ನಡೆಸಿ, E20 ಇಂಧನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಂಗ್ರಹಿಸಿರುವ ಮನವಿಗಳನ್ನು ಸಲ್ಲಿಸಲು ಎಎಪಿ ನಾಯಕರು ಮುಂದಾಗಿದ್ದರು.
ಆದರೆ ಫಿರೋಜ್ ಶಾ ರಸ್ತೆಯಲ್ಲಿ ದೆಹಲಿ ಪೊಲೀಸರು ಮೆರವಣಿಗೆಯನ್ನು ತಡೆದರು. ಇದರಿಂದ ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಎಎಪಿ ನಾಯಕರು ಅಲ್ಲಿಯೇ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ವರದಿಗಳ ಪ್ರಕಾರ, E20 ಪೆಟ್ರೋಲ್ ವಿರುದ್ಧ ಸುಮಾರು 2.3 ಲಕ್ಷಕ್ಕೂ ಹೆಚ್ಚು ಮನವಿಗಳನ್ನು ಪ್ರಧಾನಿ ಅವರಿಗೆ ಸಲ್ಲಿಸಲು ಎಎಪಿ ಮುಂದಾಗಿತ್ತು.
E20 ಎಂದರೆ ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡಿರುವ ಇಂಧನ. ಗ್ರಾಹಕರಿಗೆ E20 ಜೊತೆಗೆ ಸಾಮಾನ್ಯ ಪೆಟ್ರೋಲ್ ಆಯ್ಕೆಯನ್ನೂ ನೀಡಬೇಕು ಎಂಬುದು ಕೇಜ್ರಿವಾಲ್ ಅವರ ಪ್ರಮುಖ ಬೇಡಿಕೆಯಾಗಿದೆ. E20 ನೀತಿಯಿಂದ ಹಳೆಯ ವಾಹನಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನಿವಾಸದತ್ತ ಮೆರವಣಿಗೆ ನಡೆಸಲು ಅನುಮತಿ ಇರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರಧಾನಿ ನಿವಾಸದ ಸುತ್ತಲಿನ ಪ್ರದೇಶದಲ್ಲಿ ನಿರ್ಬಂಧಿತ ಆದೇಶಗಳು ಜಾರಿಯಲ್ಲಿರುವುದರಿಂದ ಮೆರವಣಿಗೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಮೆರವಣಿಗೆಯನ್ನು ತಡೆದ ಬಳಿಕ ಕೇಜ್ರಿವಾಲ್ ಅವರು E20 ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರ E20 ನೀತಿಯನ್ನು ಮರುಪರಿಶೀಲಿಸಬೇಕು ಮತ್ತು ಗ್ರಾಹಕರಿಗೆ ಇಂಧನ ಆಯ್ಕೆಯ ಸ್ವಾತಂತ್ರ್ಯ ನೀಡಬೇಕು ಎಂದು ಎಎಪಿ ಒತ್ತಾಯಿಸಿದೆ.