ಬೆಂಗಳೂರು: ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಯ 8 ತಿಂಗಳ ಮಗುವನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಆರೈಕೆ ಮಾಡಿ, ತಾಯಿಗೆ ಪರೀಕ್ಷೆ ಬರೆಯಲು ನೆರವಾದ ಹೃದಯಸ್ಪರ್ಶಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್ 2ರಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ವ್ಯಾಪ್ತಿಯ ಕೃಷ್ಣ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಮಗು ಜೋರಾಗಿ ಅಳಲು ಆರಂಭಿಸಿದ್ದರಿಂದ ತಾಯಿ ಆತಂಕಗೊಂಡಿದ್ದರು.
ಇದನ್ನು ಗಮನಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ, “ನೀವು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ, ಮಗುವನ್ನು ನಾವು ನೋಡಿಕೊಳ್ಳುತ್ತೇವೆ” ಎಂದು ಧೈರ್ಯ ತುಂಬಿದ್ದಾರೆ. ಬಳಿಕ ಮಗುವನ್ನು ತಮ್ಮ ಆರೈಕೆಗೆ ತೆಗೆದುಕೊಂಡು, ಸೀರೆಯಿಂದ ಜೋಲಿ ಕಟ್ಟಿ ತೂಗಿಸಿ ಸಮಾಧಾನಪಡಿಸಿದ್ದಾರೆ.
ಮಹಿಳಾ ಪೊಲೀಸರು ಮಗುವನ್ನು ಆಟವಾಡಿಸುತ್ತಾ, ಚಪ್ಪಾಳೆ ತಟ್ಟುತ್ತಾ ನೋಡಿಕೊಂಡಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರೀಕ್ಷೆ ಮುಗಿದ ಬಳಿಕ ತಾಯಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕರ್ತವ್ಯದ ಜೊತೆಗೆ ಮಾನವೀಯತೆಯನ್ನೂ ಮೆರೆದ ಪೊಲೀಸರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.