ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನದಿಂದ ದಿನಕ್ಕೆ ಗಲಾಟೆಗಳು ಹೆಚ್ಚಾಗುತ್ತಿವೆ. ಸ್ಪರ್ಧಿಗಳ ನಡುವಿನ ವಾಗ್ವಾದ ಈಗ ವೈಯಕ್ತಿಕ ಟೀಕೆ ಹಾಗೂ ಅಸಭ್ಯ ಪದಗಳ ಬಳಕೆಯ ಹಂತಕ್ಕೆ ತಲುಪಿದೆ. ಗಾನವಿ ಮತ್ತು ಗಗನ್ ನಡುವೆ ನಡೆದ ಜಗಳದ ವೇಳೆ ಗಾನವಿ ಬಳಸಿದ ಅಸಹ್ಯಕರ ಪದಗಳ ವಿಚಾರವಾಗಿ ಕಿಚ್ಚ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುವಾಗ ಸುದೀಪ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ವಾರಪೂರ್ತಿ ಟಾಸ್ಕ್ಗಳ ನೆಪದಲ್ಲಿ ಸ್ಪರ್ಧಿಗಳು ನಡೆದುಕೊಂಡ ರೀತಿಗೆ ಈ ವಾರದ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಳಪೆ ಪಟ್ಟ ನೀಡಿದ ಬಳಿಕ ಗಗನ್ ಮತ್ತು ಗಾನವಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಗಗನ್ ಆಡಿದ ಮಾತಿಗೆ ಪ್ರತಿಕ್ರಿಯಿಸಿದ ಗಾನವಿ, ಅಸಭ್ಯ ಪದಗಳನ್ನು ಬಳಸಿದ್ದರು. ಈ ಘಟನೆ ಕುರಿತು ಮಾತನಾಡಿದ ಸುದೀಪ್, ಸ್ಪರ್ಧಿಗಳ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
“ನಿಮ್ಮ ನಡುವೆ ಮನಸ್ತಾಪವಿದ್ದರೆ ಅಥವಾ ಜಗಳವಾಗುತ್ತಿದ್ದರೆ ನಿಮ್ಮ ಬಗ್ಗೆ ನೀವೇ ಏನು ಬೇಕಾದರೂ ಮಾತನಾಡಿಕೊಳ್ಳಿ. ಆದರೆ ನಿಮ್ಮ ಕುಟುಂಬದವರನ್ನು ಈ ವಿಚಾರದ ನಡುವೆ ಎಳೆದು ತರಬೇಡಿ. ಇದು ವ್ಯಕ್ತಿತ್ವದ ಆಟ ಎಂದು ಹೇಳಿಕೊಳ್ಳುವ ನಿಮ್ಮನ್ನು ಕೋಟ್ಯಂತರ ಜನರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಸಭ್ಯವಾಗಿ ಮಾತನಾಡಿದರೆ ನಿಮ್ಮ ವ್ಯಕ್ತಿತ್ವಕ್ಕೆ ಇರುವ ಬೆಲೆ ಏನು?” ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಗಗನ್ ಬಗ್ಗೆ ಬೇಕಾದಷ್ಟು ಟೀಕೆ ಮಾಡಿ, ಅವರ ಮಾತುಗಳನ್ನು ವಿರೋಧಿಸಿ, ಅವರ ನಿಲುವಿನ ವಿರುದ್ಧ ಧ್ವನಿ ಎತ್ತಿ. ಆದರೆ ಅದನ್ನೆಲ್ಲ ಬಿಟ್ಟು ಅವರ ಕುಟುಂಬದ ಬಗ್ಗೆ ಮಾತನಾಡುವ ಅಗತ್ಯವೇನಿದೆ ಎಂದು ಸುದೀಪ್ ಖಾರವಾಗಿ ಪ್ರಶ್ನಿಸಿದ್ದಾರೆ. ಸ್ಪರ್ಧಿಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಮಿತಿ ಮೀರಬಾರದು ಎಂದು ಕಿವಿಮಾತು ಹೇಳಿದ್ದಾರೆ. ಈ ವಿಚಾರವನ್ನು ವಿವರಿಸುವಾಗ ಸುದೀಪ್ ಭಾವುಕರಾಗಿ ಕಣ್ಣೀರಿಟ್ಟಿದ್ದು, ಸಂಚಿಕೆಯ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ.