Search


ʻಕೃಷ್ಣ ದೇವರಾಯʼರಾದ ನಟ ಕಿಚ್ಚ ಸುದೀಪ್‌; ಬರ್ತಡೇ ದಿನ ಅಭಿಮಾನಿಗಳಿಗೆ ಗಿಫ್ಟ್‌

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು 53 ವಸಂತಗಳನ್ನು ಪೂರೈಸಿ 54ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು (ಸೆಪ್ಟೆಂಬರ್ 2) ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮ ನಡೆಯುತ್ತಿದ್ದು, ಈ ಬಾರಿ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳದ ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ನಿರೀಕ್ಷೆಯಂತೆಯೇ ಕಿಚ್ಚ ಸುದೀಪ್ ಅವರ ಮುಂಬರುವ ಮಹತ್ವಾಕಾಂಕ್ಷೆಯ ಚಿತ್ರದ ಘೋಷಣೆ ಹುಟ್ಟುಹಬ್ಬದ ದಿನವೇ ಹೊರಬಿದ್ದಿದೆ. ಆಕರ್ಷಕ ಟೀಸರ್ ಮೂಲಕ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿದ್ದು, ಚಿತ್ರಕ್ಕೆ ‘ದೇವರಾಯ’ ಎಂದು ಹೆಸರಿಡಲಾಗಿದೆ. ಚಿತ್ರದ ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಹಾಗೂ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ಸುದೀಪ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.

‘ದೇವರಾಯ’ ಚಿತ್ರವನ್ನು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರ ಒಡೆತನದ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಹಾಗೂ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಜಂಟಿಯಾಗಿ ನಿರ್ಮಿಸುತ್ತಿವೆ. ಪ್ರಿಯಾ ಸುದೀಪ್ ಅವರು ಚಿತ್ರವನ್ನು ಅರ್ಪಿಸುತ್ತಿದ್ದು, ಟಿ.ಜಿ. ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಅವರು ಬಂಡವಾಳ ಹೂಡುತ್ತಿದ್ದಾರೆ.

ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಮೂಲಕವೇ ಸಿನಿಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಚಿತ್ರತಂಡ, ಸಿನಿಮಾದ ನಿರ್ದೇಶಕರ ಹೆಸರನ್ನು ಮಾತ್ರ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ತೆಲುಗು ಮೂಲದ ನಿರ್ದೇಶಕರೊಬ್ಬರು ‘ದೇವರಾಯ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದು ಬೃಹತ್ ಐತಿಹಾಸಿಕ ಹಿನ್ನೆಲೆಯ ಚಿತ್ರವಾಗಿರುವ ಸಾಧ್ಯತೆ ಇದ್ದು, ಅದ್ದೂರಿ ಚಿತ್ರೀಕರಣ ಹಾಗೂ ತಾಂತ್ರಿಕ ಸಿದ್ಧತೆಗಳಿಗೆ ಹೆಚ್ಚಿನ ಸಮಯ ಬೇಕಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡುವ ಗುರಿ ಚಿತ್ರತಂಡ ಹೊಂದಿದೆ. ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ‘ದೇವರಾಯ’ ಯಾವ ರೀತಿಯ ಕಥೆಯನ್ನು ಹೊಂದಿರಲಿದೆ? ಚಿತ್ರದ ನಿರ್ದೇಶಕರು ಯಾರು? ಎಂಬ ಕುತೂಹಲ ಈಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

By Ravikumar - 02-09-2026


Ads in Post