ಬೆಂಗಳೂರು: ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ವಿರುದ್ಧ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲೇ ಹಲ್ಲೆ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ. ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್ ವಿಜಯ್ ಮತ್ತು ಅದೇ ಕಾಲೇಜಿನ ವಿದ್ಯಾರ್ಥಿ ಮನೀಶ್ ಗೌಡ ನಡುವೆ ಕಾರು ಓವರ್‌ಟೇಕ್ ವಿಚಾರವಾಗಿ ಸೋಮವಾರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಮನೀಶ್ ಗೌಡ ಹಾಗೂ ಆತನ ಸ್ನೇಹಿತರು ಸಾಮ್ರಾಟ್ ಪ್ರಯಾಣಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿದ್ದರಿಂದ ಇಬ್ಬರ ನಡುವೆ ಕಿರಿಕ್ ಉಂಟಾಗಿತ್ತು ಎಂದು ತಿಳಿದುಬಂದಿದೆ.
ಈ ಘಟನೆಯ ಬೆನ್ನಲ್ಲೇ ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಆರ್‌ವಿ ಕಾಲೇಜು ಆವರಣದಲ್ಲಿ ಮನೀಶ್ ಗೌಡ ತನ್ನ ಬೈಕ್ ಪಾರ್ಕ್ ಮಾಡುತ್ತಿದ್ದ ವೇಳೆ, ಬಿಳಿ ಬಣ್ಣದ ಸಫಾರಿ ಕಾರಿನಲ್ಲಿ ಬಂದ ಸಾಮ್ರಾಟ್ ವಿಜಯ್ ಮತ್ತು ಆತನ ಸ್ನೇಹಿತರು ಮನೀಶ್‌ನನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಳಿಕ ಕಾರನ್ನು ಪಟ್ಟಣಗೆರೆ ಮುಖ್ಯರಸ್ತೆಯತ್ತ ಚಲಾಯಿಸಿಕೊಂಡು ಹೋಗಿ, ಚಲಿಸುತ್ತಿದ್ದ ಕಾರಿನಲ್ಲೇ ಮನೀಶ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾಮ್ರಾಟ್ ವಿಜಯ್ ಸೇರಿದಂತೆ ಸಮೃದ್ಧ ಸಿಂಹ, ವಿಶ್ವಾಸ್, ವೆಂಕಟೇಶ್, ಸಮೀದ್ ಹಾಗೂ ಇತರರು ಮನೀಶ್‌ನ ಮುಖ, ಕುತ್ತಿಗೆ, ಎದೆ ಮತ್ತು ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯ ಬಳಿಕ ಗಾಯಗೊಂಡ ಮನೀಶ್‌ನನ್ನು ನಡುರಸ್ತೆಯಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ನಂತರ ಮನೀಶ್ ಗೌಡ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ಸಾಮ್ರಾಟ್ ವಿಜಯ್ ಹಾಗೂ ಆತನ ಸ್ನೇಹಿತರ ವಿರುದ್ಧ ಅಪಹರಣ ಮತ್ತು ಹಲ್ಲೆ ಆರೋಪದಡಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.