ಬೆಂಗಳೂರು: ಪಶುವೈದ್ಯಾಧಿಕಾರಿ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಇತ್ತೀಚೆಗೆ ED ಕರ್ನಾಟಕ ಲೋಕಸೇವಾ ಆಯೋಗದ ಮೇಲೆ ದಾಳಿ ನಡೆಸಿತ್ತು. ಮಾಜಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ 21ಕ್ಕೂ ಹೆಚ್ಚು ಕಡೆ ದಾಳಿ ಮಾಡಲಾಗಿತ್ತು, ಇದೀಗ ಈ ಪರೀಕ್ಷೆಗಳನ್ನ ನಡೆಸಿದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೆಲ ದಿನಗಳ ಹಿಂದೆ ಕರ್ನಾಟಕದ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಬೃಹತ್ ಶೋಧ ಕಾರ್ಯಾಚರಣೆ ನಡೆಸಿತ್ತು.ಈ ದಾಳಿ ಬೆನ್ನಲ್ಲೇ ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಜ್ಞಾನೇಂದ್ರ ಕುಮಾರ್ ಅವರು KPSCಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕೆಲಸ ಮಾಡಿದ್ದರು.
ಇನ್ನು ಜ್ಞಾನೇಶ್ ಕುಮಾರ್ ಪಶು ವೈದ್ಯಾಧಿಕಾರಿ ಪರೀಕ್ಷೆಗೂ ಮುನ್ನ KAS ಪರೀಕ್ಷೆ ಕೂಡ ನಡೆಸಿದ್ದರು ಎಂದು ತಿಳಿದು ಬಂದಿದ್ದು, ಇವರ ಜೊತೆ ಶಾಂತ ಹೊಸಮನಿ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿದೆ. ಇದೀಗ ಜ್ಞಾನೇಂದ್ರ ಕುಮಾರ್ ನಾಪತ್ತೆ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿವೆ. ಜ್ಞಾನೇಂದ್ರ ಕುಮಾರ್ ಅವರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಕಾಏಕಿ ಕಣ್ಮರೆಯಾಗಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಇತ್ತೀಚಿನ ದಾಳಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ರಾಜ್ಯದ ಆಡಳಿತ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಅದರಲ್ಲೂ ವಿಮಾನ ಟೇಕ್ಆಫ್ ಆಗುವ ಕೆಲವೇ ಕ್ಷಣಗಳ ಮುನ್ನ 30 ಸಾವಿರ ಹಣ ನೀಡಿ ತರಾತುರಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದು, ನಿಜಕ್ಕೂ ದೆಹಲಿಗೆ ಪ್ರಯಾಣಿಸಿದ್ದಾರೆಯೇ ಅಥವಾ ಬೇರೆಡೆ ತೆರಳಿದ್ದಾರಾ ಎಂಬುದು ಇನ್ನು ನಿಗೂಢವಾಗಿ ಉಳಿದಿದೆ, ಕುಟುಂಬಸ್ಥರು ಮತ್ತು ಆಪ್ತರು ಅವರನ್ನು ಸಂಪರ್ಕಿಸಲು ನಡೆಸಿದ ಸತತ ಪ್ರಯತ್ನಗಳು ವಿಫಲವಾಗಿವೆ.