Search


KPSC ಹಗರಣ; ನಾಪತ್ತೆಯಾದ ಅಧಿಕಾರಿಯ ಬೆನ್ನುಬಿದ್ದ ED, ಉತ್ತರ ಪ್ರದೇಶದಲ್ಲಿ ಶೋಧ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಬೆಂಗಳೂರಿನ ಹಾಗೂ ಉತ್ತರ ಪ್ರದೇಶದ ಬರೇಲಿ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜ್ಞಾನೇಂದ್ರ ಗಂಗ್ವಾರ್ 2016ನೇ ಬ್ಯಾಚ್‌ನ IAS ಅಧಿಕಾರಿಯಾಗಿದ್ದು, ಪ್ರಸ್ತುತ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು KPSCಯ ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದರು. ಇವರ ನೇತೃತ್ವದಲ್ಲೇ ಪಶು ವೈದ್ಯಧಿಕಾರಿಗಳ ಪರೀಕ್ಷೆ ನಡೆದಿದ್ದು, ಐ ಪರೀಕ್ಷೆ ಹಗರಣದಲ್ಲಿ ಈತನ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಆಗಸ್ಟ್ 23ರಂದು ನಡೆದ ದಾಳಿಯ ವೇಳೆ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ED ಅಧಿಕಾರಿಗಳು CRPF ಸಿಬ್ಬಂದಿಯೊಂದಿಗೆ ತೆರಳಿದ್ದರು. ಮನೆಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಕೀ-ಮೇಕರ್ ಮೂಲಕ ಬಾಗಿಲು ತೆರೆದು ಶೋಧ ನಡೆಸಲಾಗಿದೆ. ಶೋಧದ ವೇಳೆ ಪ್ರಿಂಟರ್ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಆದರೆ ಜ್ಞಾನೇಂದ್ರ ಮನೆಯಿಂದ ನಾಪತ್ತೆಯಾಗುವ ಮುನ್ನ ಎಲ್ಲಾ ದಾಖಲೆಗಳನ್ನ ತನ್ನೊಂದಿಗೆ ತೆಗೆದುಕೊಂಡು ಹೋಗುದ್ದು, ಮನೆಯಲ್ಲಿ ಇಡಿ ಅಧಿಕಾರಿಗಳಿಗೆ ಯಾವುದೇ ದಾಖಲೆ ದೊರೆತಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇದಕ್ಕೂ ಮುನ್ನ ಜ್ಞಾನೇಂದ್ರ ಅವರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕುಟುಂಬದ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವರು ಉತ್ತರ ಪ್ರದೇಶದ ತಮ್ಮ ಊರಿಗೆ ತೆರಳಿದ್ದರು ಎಂದು ಸ್ಪಷ್ಟಪಡಿಸಿದ್ದರು. KPSCಯ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, OMR ಉತ್ತರ ಪತ್ರಿಕೆ ತಿದ್ದುಪಡಿ ಹಾಗೂ ಅಭ್ಯರ್ಥಿಗಳಿಂದ ಹಣದ ಬೇಡಿಕೆ ಸೇರಿದಂತೆ ಹಲವು ಆರೋಪಗಳ ಕುರಿತು ED ತನಿಖೆ ನಡೆಸುತ್ತಿದೆ. ಪ್ರತಿ ಅಭ್ಯರ್ಥಿಯಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿದೆ.

ಆಗಸ್ಟ್ 18ರಂದು ED ಅಧಿಕಾರಿಗಳು KPSC ಕಚೇರಿ ಸೇರಿದಂತೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಶಾಂತಾ ಹೊಸಮನಿ ಮತ್ತಿತರರಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ಶೋಧ ನಡೆಸಿದ್ದರು. ಇದೀಗ IAS ಅಧಿಕಾರಿ ಗಂಗ್ವಾರ್ ಅವರ ನಿವಾಸಗಳ ಮೇಲಿನ ದಾಳಿಯಿಂದ ಪ್ರಕರಣದ ತನಿಖೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

By Ravikumar - 24-08-2026


Ads in Post