ಕೆಪಿಎಸ್ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ಅಧಿಕಾರಿಗಳು ಮುಖಾಮುಖಿಯಾಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ವಿಚಾರಣೆ ವೇಳೆ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡಿದ್ದು, “ಎಲ್ಲಾ ಆಗಿದ್ದು ನಿನ್ನಿಂದಲೇ” ಎಂದು ಪರಸ್ಪರ ಕೆಸರೆರಚಾಟ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. “ನೀನು ಹೇಳಿದ್ದಕ್ಕೆ ನಾನು ಮಾಡಿದೆ” ಎಂದು ಜ್ಞಾನೇಂದ್ರ ಕುಮಾರ್ ಆರೋಪಿಸಿದರೆ, ಹಣ ಬರುತ್ತದೆ ಎಂದು ಡೀಲ್ ಮಾಡಿದ್ದು ನೀನೇ ಎಂದು ಬಸವರಾಜ್ ಕನ್ನಾಳೆ ವಿರುದ್ಧ ಆರೋಪ ಕೇಳಿಬಂದಿದೆ.
ವಿಚಾರಣೆ ವೇಳೆ ಇದು ತನ್ನ ಕೊನೆಯ ಅವಕಾಶವಾಗಿದ್ದು, ಅಭ್ಯರ್ಥಿಗಳನ್ನು ಕರೆದುಕೊಂಡು ಬರುವಂತೆ ಹೇಳಲಾಗಿತ್ತು ಎಂಬ ಮಾತುಗಳೂ ಕೇಳಿಬಂದಿವೆ ಎನ್ನಲಾಗಿದೆ. ಮತ್ತೆ ಕೆಪಿಎಸ್ಸಿ ಕಂಟ್ರೋಲರ್ ಹುದ್ದೆಗೆ ಬರುವ ಸಾಧ್ಯತೆ ಇಲ್ಲದ ಕಾರಣ ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಅಭ್ಯರ್ಥಿಗಳನ್ನು ಹುಡುಕಿ ಕರೆತಂದೆ ಎಂದು ಆರೋಪಿಗಳು ಪರಸ್ಪರ ಆರೋಪಿಸಿಕೊಂಡಿದ್ದಾರೆ. ಇದೀಗ ಎಲ್ಲಾ ಆರೋಪಗಳನ್ನು ತನ್ನ ಮೇಲೆಯೇ ಹೊರಿಸಲಾಗುತ್ತಿದೆ ಎಂದು ಆರೋಪಿಸಿ ಇಬ್ಬರ ನಡುವೆ ವಾಗ್ವಾದ ನಡೆದಿರುವುದಾಗಿ ತಿಳಿದುಬಂದಿದೆ.
ಪ್ರಕರಣದಲ್ಲಿ ಹಾಸನ, ಬಾಲ್ಕಿ ಹಾಗೂ ಬೀದರ್ ಭಾಗದ ಬಹುತೇಕ ಅಭ್ಯರ್ಥಿಗಳು ಆಯ್ಕೆಯಾಗಿರುವ ಬಗ್ಗೆ ಸಿಐಡಿ ತಂಡ ಅನುಮಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ವಿಶೇಷವಾಗಿ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಕುರಿತು ತನಿಖೆ ತೀವ್ರಗೊಳಿಸಿರುವ ಸಿಐಡಿ, ಅಭ್ಯರ್ಥಿಗಳನ್ನು ನಿರಂತರವಾಗಿ ವಿಚಾರಣೆಗೆ ಕರೆಸುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಕುರಿತು ತನಿಖಾಧಿಕಾರಿಗಳು ಹಲವು ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದೇ ವೇಳೆ ಪ್ರಶ್ನೆಪತ್ರಿಕೆ ಸಂಬಂಧಿತ ತರಬೇತಿಯನ್ನು ಪರೀಕ್ಷೆಗೆ ಒಂದು ವಾರ ಮುಂಚಿತವಾಗಿಯೇ ಬೆಂಗಳೂರಿನ ದೇವನಹಳ್ಳಿ ಸಮೀಪದ ಖಾಸಗಿ ವಿಲ್ಲಾ ಕಂ ರೆಸಾರ್ಟ್ನಲ್ಲಿ ನೀಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ಸ್ಥಳದ ಮೇಲೆ ಈಗಾಗಲೇ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆಹಾಕಿದ್ದು, ನಿನ್ನೆಯಷ್ಟೇ ಸಿಐಡಿ ಅಧಿಕಾರಿಗಳೂ ಪರಿಶೀಲನೆ ನಡೆಸಿದ್ದಾರೆ. ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಯನ್ನು ಸ್ಥಳಕ್ಕೆ ಕರೆತಂದು ಮಹಜರು ಪ್ರಕ್ರಿಯೆ ನಡೆಸಲಾಗಿದ್ದು, ಸಿಐಡಿ ಡಿವೈಎಸ್ಪಿ ಗೀತಾ ನೇತೃತ್ವದ ತಂಡ ದೇವನಹಳ್ಳಿಯ ಖಾಸಗಿ ವಿಲ್ಲಾದಲ್ಲಿ ಸ್ಥಳ ಮಹಜರು ನಡೆಸಿ ಮಹತ್ವದ ಮಾಹಿತಿ ಸಂಗ್ರಹಿಸಿದೆ.