ನವದೆಹಲಿ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಅವರ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ಗೆ ಕರ್ನಾಟಕದಲ್ಲಿ ನಿಯಮ ಬಾಹಿರವಾಗಿ 100 ಕೋಟಿ ಮೌಲ್ಯದ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ದೆಹಲಿಯ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ಖರ್ಗೆ ಕುಟುಂಬದ ವಿರುದ್ಧದ ಮೂರು ಪ್ರಮುಖ ಭೂ ಹಗರಣಗಳ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ.
(1) ‘ಸಿದ್ದಾರ್ಥ ವಿಹಾರ್ ಟ್ರಸ್ಟ್’ನಲ್ಲಿ (Siddharth Vihar Trust) ಕೇವಲ ಖರ್ಗೆ ಕುಟುಂಬದ ಸದಸ್ಯರು ಮಾತ್ರ ಇದ್ದಾರೆ (Siddharth Vihar Trust) ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಅವರ ಅಳಿಯ ಮತ್ತು ಅವರ ಧರ್ಮಪತ್ನಿ ಸದಸ್ಯರಾಗಿದ್ದಾರೆ. ಇಡೀ ಕುಟುಂಬವೇ ಸೇರಿಕೊಂಡು ತಮ್ಮ ರಾಜಕೀಯ ಪ್ರಭಾವ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ನಾಟಕದ ವಿವಿಧೆಡೆ ಬಡವರ ಭೂಮಿಯನ್ನು ಲೂಟಿ ಮಾಡಿದೆ” ಎಂದು ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ.
(2) ʻಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2024ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವತಿಯಿಂದ ‘ಏರೋಸ್ಪೇಸ್ ಮತ್ತು ಡಿಫೆನ್ಸ್ ಸಂಶೋಧನೆ ಮತ್ತು ಅಭಿವೃದ್ಧಿ’ ಹೆಸರಿನಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಭಾರಿ ಮೌಲ್ಯದ 5 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿದೆ. ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಬೇಕಿದ್ದ ಈ ಜಮೀನನ್ನು ಖರ್ಗೆ ಅವರ ಖಾಸಗಿ ಟ್ರಸ್ಟ್‌ಗೆ ನೀಡಲಾಗಿದ್ದು, ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 100 ಕೋಟಿ ರೂ.” ಎಂದು ಬಿಜೆಪಿ ಹೇಳಿದೆ.
(3) ʻಕರ್ನಾಟಕ ಸರ್ಕಾರವು ಕಲ್ಬುರ್ಗಿಯಲ್ಲಿ ಬರೋಬ್ಬರಿ 19 ಎಕರೆ ಸರ್ಕಾರಿ ಜಮೀನನ್ನು ಖರ್ಗೆ ಅವರ ಖಾಸಗಿ ಟ್ರಸ್ಟ್‌ಗೆ ಪರಭಾರೆ ಮಾಡಿದೆ. ಸರ್ಕಾರದ ಆಸ್ತಿಯಾಗಿದ್ದ 19 ಎಕರೆ ಭೂಮಿ ರಾತ್ರೋರಾತ್ರಿ ಖರ್ಗೆ ಕುಟುಂಬದ ಖಾಸಗಿ ಸ್ವತ್ತಾಗಿ ಬದಲಾಗಿದೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಅಧಿಕಾರ ಬಳಸಿ ಈ ಭೂಮಿಯನ್ನು ಹೇಗೆ ಕಬಳಿಸಿದರು ಎಂಬುದಕ್ಕೆ ಕಾಂಗ್ರೆಸ್ ಉತ್ತರ ನೀಡಬೇಕು” ಎಂದು ಪ್ರದೀಪ್ ಭಂಡಾರಿ ಆಗ್ರಹಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರ ಮೇಲೂ ಹರಿ ಹಾಯ್ದಿರುವ ಪ್ರದೀಪ್ ಭಂಡಾರಿ " ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರು ದೇಶದಲ್ಲಿ ಯಾವ ರೀತಿಯಾಗಿ ಭೂ ಲೂಟಿ ಮಾಡಿದ್ದಾರೋ, ಅದೇ ಮಾದರಿಯನ್ನು ಈಗ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್ ಮೂಲಕ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ರಾಬರ್ಟ್ ವಾದ್ರಾ ಅವರಿಗೆ ಎಲ್ಲಿ ಜಮೀನು ಕಂಡರೂ ಕಣ್ಣು ಬೀಳುವಂತೆ ಕರ್ನಾಟಕದಲ್ಲಿ ಎಲ್ಲಿ ಪ್ರಮುಖ ಜಾಗಗಳಲ್ಲಿ ಜಮೀನುಗಳಿದ್ದರೂ ಮಲ್ಲಿಕಾರ್ಜುನ ಖರ್ಗೆ ತಮ್ಮ ಪ್ರಭಾವ ಬಳಸಿ ಅದನ್ನು ಕಬಳಿಸುತ್ತಿದ್ದಾರೆ. ಇದಕ್ಕೆ ಅವರು ಉತ್ತರ ನೀಡಲೇಬೇಕು. ಇವರ ಸರಣಿ ಭ್ರಷ್ಟಾಚಾರದ ಪ್ರಕರಣಗಳನ್ನು ನಾನು ಶೀಘ್ರದಲ್ಲೇ ಸಾರ್ವಜನಿಕವಾಗಿ ಪ್ರಸ್ತುತಪಡಿಸಲಿದ್ದೇನೆ” ಎಂದು ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಎಚ್ಚರಿಕೆ ನೀಡಿದ್ದಾರೆ.