ಬಿಗ್ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ಸ್ಪರ್ಧಿ ಲಿಖಿತ್ ಗೊಂಧಿ ಹೊರಬಿದ್ದಿದ್ದಾರೆ. ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಲಿಖಿತ್ಗೆ ಅದೃಷ್ಟ ಕೈಕೊಟ್ಟಿದ್ದು, ಮನೆಯ ಆತ್ಮೀಯ ಗೆಳೆಯ ಮಂಜ ಅವರಿಗೆ ಈ ಎಲಿಮಿನೇಷನ್ ಭಾರೀ ಬೇಸರ ತಂದಿದೆ. ನಾಮಿನೇಟ್ ಆಗಿದ್ದ ಯಶಸ್, ಮಂಜ ಹಾಗೂ ಧನುಷ್ ಸೇವ್ ಆಗಿದ್ದು, ಸಂಗೀತಾ, ಲಿಖಿತ್ ಮತ್ತು ಕಿರಣ್ ಶಾಸ್ತ್ರಿ ಹಾಟ್ ಸೀಟ್ನಲ್ಲಿ ಉಳಿದಿದ್ದರು.
ಈ ಮೂವರ ಪೈಕಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲ ಮನೆಮಂದಿಯಲ್ಲಿ ಮೂಡಿತ್ತು. ಈ ವೇಳೆ ಕಿಚ್ಚ ಸುದೀಪ್ ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದರು. ಮುಸುಕುಧಾರಿ, ಶಸ್ತ್ರಸಜ್ಜಿತ ಕಮಾಂಡೋಗಳು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿ ಹಾಟ್ ಸೀಟ್ನಲ್ಲಿದ್ದ ಮೂವರನ್ನೂ ಪ್ರತ್ಯೇಕವಾಗಿ ಹೊರಗೆ ಕರೆದುಕೊಂಡು ಹೋದರು. ವಾಪಸ್ ಮನೆಗೆ ಬರುವವರು ಸೇಫ್, ಮರಳಿ ಬಾರದವರು ಎಲಿಮಿನೇಟ್ ಆಗುತ್ತಾರೆ ಎಂದು ಸುದೀಪ್ ತಿಳಿಸಿದರು.
ಅದರಂತೆ ಮೊದಲು ಸಂಗೀತಾ ಹಾಗೂ ಬಳಿಕ ಕಿರಣ್ ಶಾಸ್ತ್ರಿ ಮನೆಗೆ ವಾಪಸ್ ಬಂದರು. ಆದರೆ ಲಿಖಿತ್ ಮಾತ್ರ ಮರಳಿ ಬರದ ಹಿನ್ನೆಲೆಯಲ್ಲಿ ಅವರು ಎಲಿಮಿನೇಟ್ ಆಗಿರುವುದು ಖಚಿತವಾಯಿತು. ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಲಿಖಿತ್ ಹೊರಹೋಗಿದ್ದಕ್ಕೆ ಮಂಜ ಭಾವುಕರಾದರು. ‘ನಗು ನಗುತ್ತಲೇ ಬಂದು ನಗುತ್ತಲೇ ಹೋದ’ ಎಂದು ಬೇಸರ ವ್ಯಕ್ತಪಡಿಸಿದ ಮಂಜ, ಲಿಖಿತ್ ಬಂದ ಬಳಿಕ ಇಬ್ಬರೂ ಸೇರಿ ಚಿಕನ್ ತಿನ್ನಬೇಕು ಎಂದುಕೊಂಡಿದ್ದೆ ಎಂದು ಹೇಳಿಕೊಂಡರು. ಇದರಿಂದ ಮಂಜ ಮತ್ತಷ್ಟು ಭಾವುಕರಾಗಿದ್ದು, ಮನೆಯವರು ಅವರನ್ನು ಸಮಾಧಾನಪಡಿಸಿದರು.
ಇನ್ನು ಎಲಿಮಿನೇಷನ್ಗೂ ಮುನ್ನ ಕಿಚ್ಚ ಸುದೀಪ್, ‘ನಿಮ್ಮ ಪ್ರಕಾರ ಮನೆಯಿಂದ ಯಾರು ಹೊರಹೋಗಬೇಕು?’ ಎಂದು ಸ್ಪರ್ಧಿಗಳನ್ನು ಪ್ರಶ್ನಿಸಿದ್ದರು. ಬಹುತೇಕ ಸ್ಪರ್ಧಿಗಳು ಯಶಸ್ ಕೃಷ್ಣ ಅವರ ಹೆಸರನ್ನೇ ಹೇಳಿದ್ದರು. ಆದರೆ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮೊದಲು ಸೇಫ್ ಆಗುವ ಮೂಲಕ ಯಶಸ್ ಎಲ್ಲರಿಗೂ ಶಾಕ್ ನೀಡಿದರು. ಕೊನೆಗೆ ಮನೆಯವರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದ್ದು, ಯಾರೂ ನಿರೀಕ್ಷಿಸದ ರೀತಿಯಲ್ಲಿ ಲಿಖಿತ್ ಗೊಂಡಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.