Search


ಸರ್ಕಾರಿ ಉದ್ಯೋಗದ ಅವಧಿ 15 ವರ್ಷಕ್ಕೆ ಸೀಮಿತಗೊಳಿಸಿ? ಕುಮಾರಸ್ವಾಮಿ ಹೊಸ ಚಿಂತನೆ..ಮಣೆ ಹಾಕುತ್ತಾ ಮೋದಿ ಸರ್ಕಾರ

ಬೆಂಗಳೂರು: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಿ ಉದ್ಯೋಗದ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹೊಸ ಚಿಂತನೆಯನ್ನು ಮುಂದಿಟ್ಟಿದ್ದಾರೆ. ಸರ್ಕಾರಿ ನೌಕರರ ಸೇವಾವಧಿಯನ್ನು 10ರಿಂದ 15 ವರ್ಷಗಳಿಗೆ ಸೀಮಿತಗೊಳಿಸುವ ಮೂಲಕ ಹೆಚ್ಚಿನ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸಬಹುದೇ ಎಂಬ ಪ್ರಶ್ನೆಯನ್ನು ಅವರು ಯುವಜನರ ಮುಂದಿಟ್ಟಿದ್ದಾರೆ.

ಸಾಮಾನ್ಯವಾಗಿ ಸರ್ಕಾರಿ ಉದ್ಯೋಗ ಪಡೆಯುವುದು ಅನೇಕ ಯುವಜನರ ಕನಸಾಗಿದೆ. ಸರ್ಕಾರಿ ಕೆಲಸ ಸಿಕ್ಕರೆ ಆರ್ಥಿಕ ಭದ್ರತೆ ದೊರೆಯುವುದರ ಜೊತೆಗೆ ಕುಟುಂಬದ ಜೀವನವೂ ಸುಧಾರಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ, ಒಮ್ಮೆ ಸರ್ಕಾರಿ ಉದ್ಯೋಗ ಪಡೆದವರು 30ರಿಂದ 35 ವರ್ಷಗಳವರೆಗೆ ಸೇವೆ ಸಲ್ಲಿಸುವುದರಿಂದ ಉದ್ಯೋಗದ ಅವಕಾಶಗಳು ಸೀಮಿತವಾಗುತ್ತಿವೆ. ಮತ್ತೊಂದೆಡೆ, ಉದ್ಯೋಗಕ್ಕಾಗಿ ಕಾಯುವ ಅನೇಕ ಯುವಕರು ವಯೋಮಿತಿಯನ್ನು ದಾಟಿ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯನಗರದ ಬಂಟರ ಭವನದಲ್ಲಿ ವಿದ್ಯಾರ್ಥಿಗಳು, ಯುವಕರು, ಕೆಪಿಎಸ್‌ಸಿ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸುವ ಅಭ್ಯರ್ಥಿಗಳು ಹಾಗೂ ಉದ್ಯೋಗ ವಂಚಿತರೊಂದಿಗೆ ನಡೆದ ಸಂವಾದದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ ಅವರು, ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ ಒಂದು ಸರ್ಕಾರಿ ಉದ್ಯೋಗ ದೊರೆಯುವಂತಹ ಕಾರ್ಯಕ್ರಮ ರೂಪಿಸುವ ಆಲೋಚನೆ ಇದೆ ಎಂದರು.

ಸರ್ಕಾರಿ ನೌಕರರ ಸೇವಾವಧಿಯನ್ನು 10ರಿಂದ 15 ವರ್ಷಗಳಿಗೆ ಸೀಮಿತಗೊಳಿಸಿದರೆ, ಆ ಅವಧಿ ಪೂರ್ಣಗೊಂಡ ಬಳಿಕ ಮತ್ತೊಬ್ಬರಿಗೆ ಉದ್ಯೋಗಾವಕಾಶ ಕಲ್ಪಿಸಬಹುದು ಎಂಬುದು ಅವರ ಚಿಂತನೆಯಾಗಿದೆ. ಸೇವೆಯಿಂದ ನಿವೃತ್ತರಾದವರಿಗೆ ಪಿಂಚಣಿ ದೊರೆತರೆ, ಅವರು ಅಗತ್ಯವಿದ್ದಲ್ಲಿ ಖಾಸಗಿ ವಲಯದಲ್ಲಿಯೂ ಕೆಲಸ ಮಾಡಬಹುದು. ಈ ಮೂಲಕ ಈಗಾಗಲೇ ಉದ್ಯೋಗ ಪಡೆದವರಿಗೂ ಜೀವನ ನಡೆಸಲು ಅವಕಾಶ ಸಿಗುವುದರ ಜೊತೆಗೆ, ಉದ್ಯೋಗಕ್ಕಾಗಿ ಕಾಯುತ್ತಿರುವ ಮತ್ತೊಬ್ಬರಿಗೆ ಕೆಲಸ ದೊರೆಯಬಹುದು ಎಂದು ಅವರು ವಿವರಿಸಿದರು.

ಆದರೆ, ಈ ಪ್ರಸ್ತಾವನೆ ಪ್ರಾಯೋಗಿಕವಾಗಿ ಸಾಧ್ಯವೇ? ಸರ್ಕಾರಿ ನೌಕರರ ಸೇವಾವಧಿಯನ್ನು ಕಡಿತಗೊಳಿಸುವುದರಿಂದ ಪ್ರತಿಯೊಂದು ಕುಟುಂಬಕ್ಕೂ ಉದ್ಯೋಗ ಕಲ್ಪಿಸಲು ಸಾಧ್ಯವಾಗುತ್ತದೆಯೇ? ಇಂತಹ ವ್ಯವಸ್ಥೆಯಿಂದ ಎಲ್ಲರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಕುಮಾರಸ್ವಾಮಿ ಯುವಜನರ ಮುಂದಿಟ್ಟಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ 2028ರ ವೇಳೆಗೆ ಜನರ ಮುಂದಿಡಲು ಕೆಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವಿದೆ ಎಂದು ಕುಮಾರಸ್ವಾಮಿ ಹೇಳಿದರು. ತಮ್ಮ ಉದ್ದೇಶ ಕೇವಲ ₹2,000 ನೀಡುವುದು, ಉಚಿತ ಬಸ್‌ ಸೌಲಭ್ಯ ಕಲ್ಪಿಸುವುದು ಅಥವಾ ಯುವನಿಧಿಯಂತಹ ಯೋಜನೆಗಳನ್ನು ಘೋಷಿಸುವುದಕ್ಕೆ ಸೀಮಿತವಾಗಿಲ್ಲ. ಐದು ಗ್ಯಾರಂಟಿ ಯೋಜನೆಗಳಿಗೂ ತಮ್ಮ ವಿರೋಧವಿಲ್ಲ. ಆದರೆ, ಪ್ರತಿಯೊಂದು ಕುಟುಂಬವೂ ಸ್ವಾಭಿಮಾನದಿಂದ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು ಎಂಬುದು ತಮ್ಮ ಆಶಯ ಎಂದು ಅವರು ತಿಳಿಸಿದರು.

By Ravikumar - 16-10-2026


Ads in Post