ಬೆಂಗಳೂರು: ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರೊಂದಿಗೆ ಸರ್ಕಾರಿ ನಿವಾಸದ ವಿಚಾರದಲ್ಲಿ ಯಾವುದೇ ಗಲಾಟೆ ಅಥವಾ ಭಿನ್ನಾಭಿಪ್ರಾಯ ಇಲ್ಲ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ತಮ್ಮ ನಡುವೆ ಮನೆ ವಿವಾದ ನಡೆಯುತ್ತಿದೆ ಎಂಬ ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರಿ ನಿವಾಸ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಮನೆ ಖಾಲಿ ಇದ್ದ ಕಾರಣ ಅದನ್ನು ತನಗೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಯಾವುದೇ ವಿವಾದ ಇರುವುದಾಗಿ ತಮಗೆ ತಿಳಿದಿಲ್ಲ ಎಂದು ಹೇಳಿದರು.
ಮಹದೇವಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದ ಬೈರತಿ ಸುರೇಶ್, “ನಾನು ಮಹದೇವಪ್ಪಣ್ಣ ಅವರ ಮನೆಗೆ ಹಲವು ಬಾರಿ ಹೋಗಿದ್ದೇನೆ. ಅವರು ನನಗಿಂತ ಹಿರಿಯರು ಮತ್ತು ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಮುಂದೆ ನಾನು ಮಗನ ಸಮಾನ” ಎಂದು ತಿಳಿಸಿದರು. ಸರ್ಕಾರಿ ನಿವಾಸದ ಗೋಡೆ ಒಡೆಸಿದ ವಿಚಾರಕ್ಕೂ ಸ್ಪಷ್ಟನೆ ನೀಡಿದ ಅವರು, ಅದನ್ನು ತಾವು ಮಾಡಿಲ್ಲ ಎಂದು ಹೇಳಿದರು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೈಗೊಂಡ ಕಾಮಗಾರಿ ಇದಾಗಿದ್ದು, ಕಳೆದ ತಿಂಗಳು 15ರಂದು ಮನೆ ಖಾಲಿ ಮಾಡಿರುವ ಕುರಿತು ಪತ್ರ ಬಂದಿತ್ತು ಎಂದು ತಿಳಿಸಿದರು.
ಒಂದು ವೇಳೆ ಮಹದೇವಪ್ಪ ಅವರೇ ಆ ನಿವಾಸದಲ್ಲಿ ಮುಂದುವರಿಯಲು ಸರ್ಕಾರ ಅಥವಾ ಮುಖ್ಯಮಂತ್ರಿ ಸೂಚಿಸಿದರೆ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಬೈರತಿ ಸುರೇಶ್ ಹೇಳಿದರು. ಉಳಿದ ಅವಧಿಯವರೆಗೆ ಅವರು ಅಲ್ಲಿಯೇ ವಾಸಿಸಬಹುದು, ಈ ವಿಚಾರದಲ್ಲಿ ತನಗೆ ಯಾವುದೇ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು. ಮಹದೇವಪ್ಪ ಮತ್ತು ತಾವು ಇಬ್ಬರೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುವವರು ಎಂದು ಹೇಳಿದ ಅವರು, ತಮ್ಮ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಪುನರುಚ್ಚರಿಸಿದರು.