ಬೆಂಗಳೂರು: ನಗರದ ಹುಸ್ಕೂರು ರಸ್ತೆ (Huskur Road) ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಸಂಜೆ ವ್ಯಕ್ತಿಯೊಬ್ಬರು ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಘಟನೆಯಿಂದ ಯೆಲ್ಲೋ ಲೈನ್ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿ, ಪ್ರಯಾಣಿಕರು ಕೆಲಕಾಲ ತೊಂದರೆ ಅನುಭವಿಸಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೆಟ್ರೋ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದ ವೇಳೆ ವ್ಯಕ್ತಿ ಏಕಾಏಕಿ ಹಳಿಗೆ ಹಾರಿದ್ದಾರೆ. ರೈಲು ಚಾಲಕರು ತುರ್ತು ಬ್ರೇಕ್ ಹಾಕಿದರೂ ಅಪಘಾತ ತಪ್ಪಿಸಲು ಸಾಧ್ಯವಾಗಲಿಲ್ಲ. ಘಟನೆಯ ತಕ್ಷಣ ಮೆಟ್ರೋ ಸಿಬ್ಬಂದಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.ಮಾಹಿತಿ ತಿಳಿದ ಕೂಡಲೇ ಬಿಎಂಆರ್ಸಿಎಲ್ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೃತರ ಗುರುತು ಹಾಗೂ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಘಟನೆಯ ಹಿನ್ನೆಲೆಯಲ್ಲಿ ಯೆಲ್ಲೋ ಲೈನ್ನಲ್ಲಿ ಕೆಲವು ಸಮಯ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸುರಕ್ಷತಾ ಪರಿಶೀಲನೆ ಪೂರ್ಣಗೊಂಡ ನಂತರ ಮೆಟ್ರೋ ಸೇವೆಯನ್ನು ಹಂತ ಹಂತವಾಗಿ ಪುನರಾರಂಭಿಸಲಾಯಿತು. ಘಟನೆಯಿಂದ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಬಿಎಂಆರ್ಸಿಎಲ್ ಪ್ರಯಾಣಿಕರು ಸಹಕರಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದು, ಸೇವೆ ಪುನರಾರಂಭಗೊಂಡಿರುವುದಾಗಿ ಮಾಹಿತಿ ನೀಡಿದೆ.