Search


ಊಟ ಮಾಡುತ್ತಿದ್ದಾಗಲೇ ಹೃದಯಾಘಾತ: ಮಗಳು, ಅಳಿಯನ ಎದುರೇ ವ್ಯಕ್ತಿ ಸಾವು

ರಾಮನಗರ: ಮಗಳು ಹಾಗೂ ಅಳಿಯನೊಂದಿಗೆ ಸಂತೋಷದಿಂದ ಊಟ ಮಾಡುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತ ಸಂಭವಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟವರನ್ನು ಶಿವಲಿಂಗಯ್ಯ ಎಂದು ಗುರುತಿಸಲಾಗಿದೆ. ಮನೆಯಲ್ಲೇ ಕುಟುಂಬಸ್ಥರೊಂದಿಗೆ ಊಟ ಮಾಡುತ್ತಿದ್ದ ವೇಳೆ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು, ಮಗಳು ಮತ್ತು ಅಳಿಯನ ಎದುರಲ್ಲೇ ಕೊನೆಯುಸಿರೆಳೆದಿದ್ದಾರೆ.

ಸೋಫಾದ ಮೇಲೆ ಕುಳಿತು ಊಟ ಮಾಡುತ್ತಿದ್ದ ಶಿವಲಿಂಗಯ್ಯ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ದೃಶ್ಯ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಂದೆ ಏಕಾಏಕಿ ಕುಸಿದು ಬೀಳುವುದನ್ನು ಗಮನಿಸಿದ ಮಗಳು ತಕ್ಷಣ ಅವರ ಬಳಿ ಓಡಿ ಬಂದಿದ್ದಾರೆ. ತಂದೆಯ ಸ್ಥಿತಿಯನ್ನು ಕಂಡು ಆಘಾತಗೊಂಡ ಅವರು ಕಿರುಚುತ್ತಾ ನೆರವಿಗಾಗಿ ಪ್ರಯತ್ನಿಸಿದ್ದಾರೆ.

ಕುಸಿದು ಬಿದ್ದ ತಂದೆಗೆ ಮಗಳು ತಕ್ಷಣ ಎದೆ ಒತ್ತುವ ಮೂಲಕ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲೇ ಶಿವಲಿಂಗಯ್ಯ ಅವರು ಪ್ರಾಣಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಗಳು ಹಾಗೂ ಅಳಿಯನೊಂದಿಗೆ ಸಂತೋಷದಿಂದ ಊಟ ಮಾಡುತ್ತಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ಸಾವನ್ನಪ್ಪಿರುವ ಈ ಘಟನೆ ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

By Ravikumar - 06-09-2026


Ads in Post