ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ರೋಚಕವಾಗುತ್ತಿದೆ. ‘ರಾಕ್ಷಸರು ಹಾಗೂ ಗಂಧರ್ವರು’ ಟಾಸ್ಕ್ನಿಂದಾಗಿ ಮನೆಯೊಳಗಿನ ವಾತಾವರಣ ಮತ್ತಷ್ಟು ಬಿಸಿಯಾಗಿದೆ. ಟಾಸ್ಕ್ನ ನಿಯಮದಂತೆ ರಾಕ್ಷಸರ ತಂಡ ನೀಡುವ ಆಜ್ಞೆಗಳನ್ನು ಗಂಧರ್ವರ ತಂಡ ಪಾಲಿಸಬೇಕಿದ್ದು, ಇದೇ ವಿಚಾರವಾಗಿ ರಾಕ್ಷಸನಾಗಿರುವ ಮಂಜು ಹಾಗೂ ಗಂಧರ್ವನಾಗಿರುವ ಯಶಸ್ ನಡುವೆ ತೀವ್ರ ವಾಗ್ವಾದ ನಡೆದಿದೆ.
ಟಾಸ್ಕ್ ವೇಳೆ ಯಶಸ್ ಅವರ ಆಟದ ವೈಖರಿ ಹಾಗೂ ನಡುವಳಿಕೆಯನ್ನು ಪ್ರಶ್ನಿಸಿದ ಮಂಜು, ‘ನಿನಗೆ ಸ್ತ್ರೀ ಮೋಹ ಇದೆ’ ಎಂದು ನೇರವಾಗಿ ಆರೋಪಿಸಿದ್ದಾರೆ. ಯಶಸ್ ಮನೆಯಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳ ಜೊತೆ ಸಮಯ ಕಳೆಯುತ್ತಾರೆ ಹಾಗೂ ಅವರ ಬೆಂಬಲ ಪಡೆಯಲು ಪ್ರಯತ್ನಿಸುತ್ತಾರೆ ಎಂಬ ಆರೋಪಗಳು ಈ ಹಿಂದಿನಿಂದಲೂ ಕೇಳಿಬರುತ್ತಿವೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮಂಜು, ಟಾಸ್ಕ್ನ ನಡುವೆಯೇ ಯಶಸ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ನಿಯಮದ ಪ್ರಕಾರ ರಾಕ್ಷಸರು ನೀಡುವ ಮಾತಿಗೆ ಗಂಧರ್ವರು ತಿರುಗೇಟು ನೀಡುವಂತಿಲ್ಲ. ಹೀಗಾಗಿ ಯಶಸ್ ನಗುತ್ತಲೇ, ‘ನಿಮಗೇನು ಪುರುಷ ಮೋಹ ಇದೆಯೇ?’ ಎಂದು ಮಂಜುಗೆ ಪ್ರಶ್ನಿಸಿದ್ದಾರೆ. ಇದರಿಂದ ಕೆಲಕಾಲ ಮಂಜು ಮೌನಕ್ಕೆ ಜಾರಿದ ಪ್ರಸಂಗವೂ ನಡೆದಿದೆ.
ಈ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಯಶಸ್ ಅವರ ಆಟದ ವೈಖರಿ ಕುರಿತು ಚರ್ಚೆ ಜೋರಾಗಿದೆ. ಗೇಮ್ ಪ್ಲಾನ್ಗಿಂತಲೂ ಹೆಣ್ಣುಮಕ್ಕಳ ಜೊತೆ ಸಮಯ ಕಳೆಯುವುದಕ್ಕೆ ಯಶಸ್ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಕೆಲ ವೀಕ್ಷಕರು ಟೀಕಿಸಿದ್ದಾರೆ. ಮತ್ತೊಂದೆಡೆ, ಮಂಜು ಮಾಡಿದ ಆರೋಪಕ್ಕೆ ಕೆಲ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಆರಂಭವಾಗಿದೆ.
ಮಂಜು ಅವರ ನೇರ ಆರೋಪದ ಬಳಿಕ ಯಶಸ್ ತಮ್ಮ ಆಟದ ತಂತ್ರವನ್ನು ಬದಲಿಸಿಕೊಳ್ಳುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಇನ್ನು ‘ರಾಕ್ಷಸರು ಹಾಗೂ ಗಂಧರ್ವರು’ ಟಾಸ್ಕ್ ಮುಗಿಯುವಷ್ಟರಲ್ಲಿ ಮಂಜು ಮತ್ತು ಯಶಸ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.