ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನದಿಂದ ದಿನಕ್ಕೆ ವಿವಾದಗಳು ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಈಗ ಅವಾಚ್ಯ ಪದಗಳ ಬಳಕೆಯವರೆಗೂ ತಲುಪಿದೆ. ಮಂಜು, ಗಾನವಿ, ಗಗನ್ ಹಾಗೂ ಸೌಂದರ್ಯಾ ಅವರ ವರ್ತನೆ ಕುರಿತು ಚರ್ಚೆ ಜೋರಾಗಿದ್ದು, ಈ ನಾಲ್ವರು ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಬೇಕು ಎಂದು ಕೆಲ ವೀಕ್ಷಕರು ಒತ್ತಾಯಿಸುತ್ತಿದ್ದಾರೆ.
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ವಕೀಲ ಜಗದೀಶ್ ಅವರ ವರ್ತನೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇತರ ಸ್ಪರ್ಧಿಗಳೊಂದಿಗೆ ವಾಗ್ವಾದ, ಅಸಭ್ಯ ವರ್ತನೆ ಹಾಗೂ ನಿಯಮ ಉಲ್ಲಂಘನೆಯ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಇದೀಗ ಮತ್ತೆ ಮನೆಯೊಳಗೆ ಇದೇ ರೀತಿಯ ಗಲಾಟೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವೀಕ್ಷಕರು ಜಗದೀಶ್ ಪ್ರಕರಣವನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿನ ಸಂಚಿಕೆಗಳಲ್ಲಿ ಮಂಜು, ಗಾನವಿ, ಗಗನ್ ಹಾಗೂ ಸೌಂದರ್ಯಾ ಬಳಸಿದ್ದಾರೆ ಎನ್ನಲಾದ ಕೆಲವು ಆಕ್ಷೇಪಾರ್ಹ ಪದಗಳಿಗೆ ಪ್ರಸಾರದ ವೇಳೆ ಬೀಪ್ ಹಾಕಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಕುಟುಂಬದ ಸದಸ್ಯರ ವಿಚಾರವಾಗಿ ನಡೆದ ಮಾತಿನ ಚಕಮಕಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ವಾಗ್ವಾದ ಹಾಗೂ ಕಳಪೆ ಪ್ರಕ್ರಿಯೆ ವಿಚಾರವಾಗಿ ಉಂಟಾದ ಗಲಾಟೆಗಳು ಬಿಗ್ ಬಾಸ್ ಮನೆಯ ವಾತಾವರಣವನ್ನು ಮತ್ತಷ್ಟು ಉದ್ವಿಗ್ನಗೊಳಿಸಿವೆ.
ವಾರಾಂತ್ಯದ ಪಂಚಾಯ್ತಿಯಲ್ಲಿ ಸುದೀಪ್ ಏನು ಹೇಳುತ್ತಾರೆ?
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ವಾರಾಂತ್ಯದ ಪಂಚಾಯ್ತಿಯತ್ತ ವೀಕ್ಷಕರ ಗಮನ ಹರಿದಿದೆ. ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿಗಳ ವರ್ತನೆಯ ಬಗ್ಗೆ ಪ್ರಸ್ತಾಪಿಸಿ ಎಚ್ಚರಿಕೆ ನೀಡುತ್ತಾರಾ? ನಿಯಮ ಉಲ್ಲಂಘನೆಯ ವಿಚಾರವಾಗಿ ಕಠಿಣ ನಿರ್ಧಾರ ಕೈಗೊಳ್ಳಲಾಗುತ್ತದೆಯೇ? ಎಂಬ ಕುತೂಹಲ ಮೂಡಿದೆ.
ವಿಶೇಷವಾಗಿ ಮಂಜು ಅವರ ವರ್ತನೆ ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ. ಅವರು ಪದೇಪದೇ ಮಿತಿ ಮೀರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಈ ವಾರ ಅವರಿಗೆ ಗೇಟ್ಪಾಸ್ ಸಿಗಬಹುದೇ ಎಂಬ ಪ್ರಶ್ನೆಯೂ ವೀಕ್ಷಕರಲ್ಲಿ ಮೂಡಿದೆ. ಆದರೆ, ಮಂಜು ಸೇರಿದಂತೆ ಯಾವುದೇ ಸ್ಪರ್ಧಿಯ ಎಲಿಮಿನೇಷನ್ ಕುರಿತು ಈವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇಂದಿನ ಸಂಚಿಕೆಯಲ್ಲಿ ಯಾರು ಸೇಫ್ ಆಗಲಿದ್ದಾರೆ? ಯಾರಿಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಲಿದ್ದಾರೆ? ಮನೆಯೊಳಗಿನ ಗಲಾಟೆಗಳಿಗೆ ಯಾವ ರೀತಿಯ ಅಂತ್ಯ ಸಿಗಲಿದೆ? ಎಂಬುದನ್ನು ತಿಳಿಯಲು ಬಿಗ್ ಬಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.