Search


ಸೌಂದರ್ಯ ಕಣ್ಣೀರು, ಹಾಲು-ಮೊಟ್ಟೆ ಕಳ್ಳತನ... ಮಂಜುಗೆ ವೀಕೆಂಡ್‌ನಲ್ಲಿ ಸುದೀಪ್ ಕ್ಲಾಸ್ ಫಿಕ್ಸ್?

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೂ ಮುನ್ನ ‘ಅಗ್ನಿಪರೀಕ್ಷೆ’ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗಿತ್ತು. 60 ಮಂದಿ ಸಾಮಾನ್ಯ ಸ್ಪರ್ಧಿಗಳ ಪೈಕಿ ನಾಲ್ವರನ್ನು ಆಯ್ಕೆ ಮಾಡಿ ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಆದರೆ, ಇದೀಗ ಈ ಸಾಮಾನ್ಯ ಸ್ಪರ್ಧಿಗಳ ವರ್ತನೆ ಮನೆಯೊಳಗೆ ಅಶಾಂತಿಗೆ ಕಾರಣವಾಗಿದ್ದು, ವೀಕ್ಷಕರಿಂದಲೂ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ನಡುವೆ ವೀಕೆಂಡ್ ಎಪಿಸೋಡ್‌ನಲ್ಲಿ ಮಂಜು ಅವರಿಗೆ ಸುದೀರ್ಘ ಕ್ಲಾಸ್ ಸಿಗುವ ಸಾಧ್ಯತೆ ಕಂಡುಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ಮಂಜು ಅವರ ವರ್ತನೆ ಇದೀಗ ಚರ್ಚೆಗೆ ಕಾರಣವಾಗಿದೆ. ಮಾತನಾಡುವ ಸಂದರ್ಭದಲ್ಲಿ ಯಾವುದೇ ಮಿತಿ ಇಲ್ಲದೆ ಇತರ ಸ್ಪರ್ಧಿಗಳನ್ನು ಕೆರಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಯಾರಾದರೂ ತಮ್ಮ ಮಾತಿಗೆ ಪ್ರತಿಕ್ರಿಯಿಸಿದರೆ, ಅವರನ್ನು ಮತ್ತಷ್ಟು ಪ್ರಚೋದಿಸುವ ಮೂಲಕ ವಿವಾದಕ್ಕೆ ಕಾರಣವಾಗುತ್ತಿದ್ದಾರೆ. ಈ ವಾರದ ಹಲವು ಬೆಳವಣಿಗೆಗಳಲ್ಲಿ ಮಂಜು ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ.

ವಿಶೇಷವಾಗಿ ಸೌಂದರ್ಯಾ ಅವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಂಜು ಮಾತನಾಡಿದ್ದ ಮಾತು ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಕ್ಷಮೆ ಕೇಳುವ ಬದಲು, ತಾವು ಕಂಡಿದ್ದನ್ನೇ ಹೇಳಿದ್ದೇನೆ ಎಂಬ ನಿಲುವನ್ನು ಮಂಜು ವ್ಯಕ್ತಪಡಿಸಿದ್ದಾರೆ. ಇದರಿಂದ ಸೌಂದರ್ಯಾ ಭಾವುಕರಾಗಿ ಕಣ್ಣೀರಿಟ್ಟಿದ್ದರು.

ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ನಡೆದ ಹಾಲು ಮತ್ತು ಮೊಟ್ಟೆ ಕಳ್ಳತನದ ವಿಚಾರದಲ್ಲೂ ಮಂಜು ಅವರ ಹೆಸರು ಕೇಳಿಬಂದಿತ್ತು. ವಸ್ತುಗಳನ್ನು ತೆಗೆದುಕೊಂಡಿದ್ದನ್ನು ಸಮರ್ಥಿಸಿಕೊಂಡ ಅವರು, ಈ ವಿಚಾರವಾಗಿ ಅವಿನಾಶ್ ಅವರೊಂದಿಗೂ ವಾಗ್ವಾದಕ್ಕೆ ಇಳಿದಿದ್ದರು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವೀಕೆಂಡ್‌ನಲ್ಲಿ ಮಂಜು ಅವರನ್ನು ಕಿಚ್ಚ ಸುದೀಪ್ ಪ್ರಶ್ನಿಸುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಮನೆಯೊಳಗಿನ ಬೆಳವಣಿಗೆಗಳ ಬಗ್ಗೆ ಸ್ವತಃ ಮಂಜು ಅವರಿಗೂ ಆತಂಕ ಮೂಡಿದಂತಿದ್ದು, ‘ವೀಕೆಂಡ್‌ನಲ್ಲಿ ನಾನು ಧ್ವಂಸ ಆಗೋದು ಫಿಕ್ಸ್’ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಈ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಮಂಜು ವಿಚಾರ ಯಾವ ರೀತಿಯಲ್ಲಿ ಚರ್ಚೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

By Ravikumar - 18-09-2026


Ads in Post