Search


ನೇಪಾಳದಲ್ಲಿ ಭಾರೀ ಭೂಕುಸಿತ; ಮತ್ತೊಂದು ಭೀಕರ ಪ್ರವಾಹದ ಎಚ್ಚರಿಕೆ

ಕಠಂಡು: ವಿನಾಶಕಾರಿ ಪ್ರವಾಹದಿಂದ ಈಗಾಗಲೇ ಸಾವಿರಾರು ಜನರನ್ನು ಕಳೆದುಕೊಂಡಿರುವ ನೇಪಾಳದಲ್ಲಿ ಮತ್ತೊಮ್ಮೆ ಪ್ರವಾಹದ ಆತಂಕ ಎದುರಾಗಿದೆ. ದಾರ್ಚುಲಾ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಚೌಲಾನಿ ನದಿಯ ಹರಿವಿಗೆ ಭಾಗಶಃ ಅಡ್ಡಿಯಾಗಿದ್ದು, ನದಿಯ ಕೆಳಭಾಗದಲ್ಲಿ ಹಠಾತ್ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅಪಿ ಹಿಮಾಲ್ ಗ್ರಾಮೀಣ ಪುರಸಭೆಯ ಭಟ್ಟಾರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ಚೌಲಾನಿ ನದಿಗೆ ಕುಸಿದಿವೆ. ಪರಿಣಾಮವಾಗಿ ನದಿಯ ನೀರಿನ ಹರಿವು ಅಸ್ತವ್ಯಸ್ತಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸಿ ನದಿಯ ಹರಿವು ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾದರೆ ನದಿಯಲ್ಲಿ ನೀರು ಸಂಗ್ರಹವಾಗಿ, ನಂತರ ಏಕಾಏಕಿ ಉಕ್ಕಿ ಹರಿದು ಕೆಳಭಾಗದ ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಅಪಾಯವಿದೆ ಎಂದು ದಾರ್ಚುಲಾ ಜಿಲ್ಲಾಡಳಿತ ತಿಳಿಸಿದೆ.

ನದಿಯ ದಡ ಹಾಗೂ ಕೆಳಭಾಗದ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಅಪಾಯದ ಮತ್ತು ದುರ್ಬಲ ಪ್ರದೇಶಗಳ ಜನರಿಗೆ ಮಾಹಿತಿ ನೀಡಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಸ್ಪಂದಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸುದೂರ್‌ಪಶ್ಚಿಮ ಪ್ರಾಂತ್ಯದ ಮುಖ್ಯಮಂತ್ರಿ ಖಗ್ರಾಜ್ ಭಟ್ಟ ಅವರು ಸ್ಥಳೀಯ ಆಡಳಿತ ಮತ್ತು ಭದ್ರತಾ ಸಂಸ್ಥೆಗಳು ಹೈ ಅಲರ್ಟ್‌ನಲ್ಲಿ ಇರಬೇಕು ಎಂದು ಸೂಚಿಸಿದ್ದಾರೆ. ಸಂಭವನೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆಯೂ ಆದೇಶಿಸಿದ್ದಾರೆ. ಇದೇ ವೇಳೆ, ಪ್ರವಾಹ ಹಾಗೂ ವಿಪತ್ತು ಸಂದರ್ಭಗಳಲ್ಲಿ ನೆರವು ಪಡೆಯಲು ಜಿಲ್ಲಾಡಳಿತ ತುರ್ತು ಸಂಪರ್ಕ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

ಚೌಲಾನಿ ನದಿಯಲ್ಲಿ ಸದ್ಯ ನೀರಿನ ಮಟ್ಟ ಸಾಮಾನ್ಯವಾಗಿಯೇ ಇದೆ ಎಂದು ಸಶಸ್ತ್ರ ಪೊಲೀಸ್ ಪಡೆ ತಿಳಿಸಿದೆ. ಆದರೂ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಅಗತ್ಯವಿದ್ದಲ್ಲಿ ನದಿ ತೀರದ ನಿವಾಸಿಗಳಿಗೆ ತಕ್ಷಣ ಎಚ್ಚರಿಕೆ ನೀಡಲು ಬಾಲಾಂಚ್‌ನಲ್ಲಿರುವ ನೇಪಾಳ ಚಾಮೇಲಿಯಾ ಜಲವಿದ್ಯುತ್ ಯೋಜನೆಯ ಭದ್ರತಾ ನೆಲೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಚೌಲಾನಿ ನದಿಯನ್ನು 'ಚಾಮೇಲಿಯಾ' ಎಂದೂ ಕರೆಯಲಾಗುತ್ತದೆ. ಅಪಿ ಹಿಮಾಲ್ ಪ್ರದೇಶದಲ್ಲಿ ಹುಟ್ಟುವ ಈ ನದಿ ಮುಂದೆ ಮಹಾಕಾಳಿ ನದಿಯನ್ನು ಸೇರುತ್ತದೆ. ಮಹಾಕಾಳಿ ನದಿಯು ನೇಪಾಳ ಮತ್ತು ಭಾರತದ ಗಡಿಯ ಒಂದು ಭಾಗವನ್ನು ರೂಪಿಸುತ್ತದೆ.

By Ravikumar - 05-09-2026


Ads in Post