Search


ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಿಮ್ಮನ್ನ IAS ಮಾಡ್ತಿನಿ, ಈಗ ಸ್ವಲ್ಪ ಸಹಕಾರ ಕೊಡಿ; ಸಮಾಜವಾದಿ ನಾಯಕನ ಸಂದೇಶ ವೈರಲ್

ಲಖನೌ: ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ವಾಟ್ಸಾಪ್ ಮೂಲಕ ಆಕ್ಷೇಪಾರ್ಹ ಹಾಗೂ ಅನಗತ್ಯ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ರಾಜನ್ ರಿಜ್ವಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಈ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿವೆ.

ಎಸ್‌ಪಿಯ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ರಾಜನ್ ರಿಜ್ವಿ, ಪಾಯಲ್ ಎಂಬ ಮಹಿಳೆಗೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಸಂದೇಶದಲ್ಲಿ ಆಕೆಯ ಸೌಂದರ್ಯ, ವ್ಯಕ್ತಿತ್ವ, ಸ್ವಭಾವ ಹಾಗೂ ಕೆಲಸದ ಬಗ್ಗೆ ವೈಯಕ್ತಿಕವಾಗಿ ಹೊಗಳಿಕೆ ಮಾಡಲಾಗಿದೆ. ತಮ್ಮ ಮಾತುಗಳಿಂದ ಆಕೆಯ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿಯೂ ಅವರು ತಿಳಿಸಿದ್ದಾರೆ.

ಎಸ್‌ಪಿ ಅಧಿಕಾರಕ್ಕೆ ಬಂದರೆ ‘ಮುಖ್ಯಮಂತ್ರಿಗಳ ಕೋಟಾ’ದ ಮೂಲಕ ಡೆಪ್ಯುಟೇಶನ್‌ನಲ್ಲಿ ಆಕೆಯನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಲು ಪ್ರಯತ್ನಿಸುವುದಾಗಿ ರಿಜ್ವಿ ಭರವಸೆ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿ ತಮ್ಮ ಕೆಲಸವನ್ನು ಮಾಡಿಕೊಡುತ್ತಾರೆ ಎಂಬ ನಿರೀಕ್ಷೆಯನ್ನೂ ಸಂದೇಶದಲ್ಲಿ ವ್ಯಕ್ತಪಡಿಸಲಾಗಿದೆ.

ಈ ಸಂದೇಶಗಳಿಂದ ಆಕ್ರೋಶಗೊಂಡ ಮಹಿಳೆ, ರಾಜನ್ ರಿಜ್ವಿ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಅನಗತ್ಯ ಸಂದೇಶಗಳನ್ನು ಕಳುಹಿಸಿದ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂದೇಶಗಳ ಮೂಲಕ ತಮ್ಮ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ರಾಜನ್ ರಿಜ್ವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೈರಲ್ ಆಗಿರುವ ವಾಟ್ಸಾಪ್ ಸಂದೇಶಗಳ ಸತ್ಯಾಸತ್ಯತೆ ಹಾಗೂ ಮಹಿಳೆ ಮಾಡಿರುವ ಆರೋಪಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ಪ್ರಕರಣದ ಮುಂದಿನ ಬೆಳವಣಿಗೆ ಸ್ಪಷ್ಟವಾಗಲಿದೆ.

By Ravikumar - 18-09-2026


Ads in Post