ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ದೊರೆತಿದ್ದು, ಮುಂದಿನ 11 ದಿನಗಳ ಕಾಲ ದೇಶ-ವಿದೇಶಗಳ ಜನರು ಮೈಸೂರಿನ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ತಾಯಿ ಚಾಮುಂಡೇಶ್ವರಿಯ ಕೃಪೆ ಜನರ ಮೇಲಿರಲಿ, ಜನರ ಆಶೀರ್ವಾದ ನಮ್ಮ ಸರ್ಕಾರದ ಮೇಲಿರಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳೊಂದಿಗಿನ ತಮ್ಮ ಸಂಬಂಧದ ಕುರಿತು ಸ್ಪಷ್ಟನೆ ನೀಡಿದರು.
ನನಗೂ ಸ್ವಾಮೀಜಿಗಳಿಗೂ ಇರುವ ಸಂಬಂಧ ಪ್ರಶ್ನಾತೀತ. ನಾನು ಯಾವತ್ತೂ ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಎಂದು ಹೇಳಿಲ್ಲ. ಬದಲಾಗಿ, ಈ ನಾಡಿನ ಸೇವೆ ಮಾಡಿ ಎಂದಿದ್ದೇನೆ. ಆದರೆ, ಕೆಲವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಇಂತಹ ವಿಚಾರಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಡಿಕೆ ಶಿವಕುಮಾರ್ ಸಲಹೆ ನೀಡಿದರು. ನಾನು ಜನರ ಪ್ರತಿನಿಧಿಯಾಗಿದ್ದು, ಸ್ವಾಮೀಜಿಗಳು ತಮ್ಮ ಭಕ್ತರು ಹಾಗೂ ಸಮುದಾಯದ ಪ್ರತಿನಿಧಿಗಳಾಗಿದ್ದಾರೆ. ಇಂದಿನ ದಿನ ನನ್ನ ಬದುಕಿನ ಸ್ಮರಣೀಯ ದಿನ, ಭಾಗ್ಯದ ದಿನ ಹಾಗೂ ಹೊಸ ಅಧ್ಯಾಯವಾಗಿದೆ ಎಂದು ತಿಳಿಸಿದರು.
ಮಠಗಳ ಮಹತ್ವ ಅವುಗಳ ಗೋಪುರದಲ್ಲಿಲ್ಲ, ಸಮಾಜಕ್ಕೆ ಸಲ್ಲಿಸುವ ಸೇವೆಯಲ್ಲಿ ಅಡಗಿದೆ. ಚಾಮುಂಡೇಶ್ವರಿಯ ಶಕ್ತಿಯ ಜ್ಯೋತಿ ಹಾಗೂ ಶ್ರೀಗಳ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ್ದೇವೆ. ಸ್ವಾಮೀಜಿಗಳು ನಾಡಿನ ಹಬ್ಬಕ್ಕೆ ಹೊಸ ಮೆರಗು ನೀಡಿದ್ದಾರೆ. ಕೊಪ್ಪಳದ ಗವಿಮಠದ ಶ್ರೀಗಳ ಸೇವೆ ಇಡೀ ದೇಶಕ್ಕೆ ಮಾದರಿಯಾಗಿದೆ. ಜಲದೀಕ್ಷೆಯ ಮೂಲಕ ನೀರಿನ ಮಹತ್ವ ಸಾರುತ್ತಿರುವ ಕೊಪ್ಪಳದ ಶ್ರೀಗಳು ಭಗೀರಥನಿದ್ದಂತೆ. ಇಡೀ ನಾಡಿಗೆ ಜಲದೀಕ್ಷೆಯ ಅಗತ್ಯವಿದೆ ಎಂದು ಹೇಳಿದರು.
ದಸರಾ ಎಂದರೆ ಒಗ್ಗಟ್ಟನ್ನು ಸಾರುವ ಹಬ್ಬ. ಕಂಬಳಕ್ಕೆ ವಿರೋಧ ವ್ಯಕ್ತವಾದರೂ, ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅದನ್ನು ದಸರಾ ಉತ್ಸವಕ್ಕೆ ತಂದಿದ್ದೇವೆ. ದಸರಾ ಬಣ್ಣಗಳ ಹಬ್ಬವಾಗಿದ್ದು, ಮೈಸೂರಿನ ಸಂಸ್ಕೃತಿ ಒಬ್ಬರಿಂದ ರೂಪುಗೊಂಡಿದ್ದಲ್ಲ, ಎಲ್ಲರ ಕೊಡುಗೆಯಿಂದ ಬೆಳೆದಿದೆ. ಮೈಸೂರಿನ ಸಂಪತ್ತು ಕೇವಲ ಅರಮನೆಗೆ ಸೀಮಿತವಾಗಿಲ್ಲ. ಅರಮನೆಯ ಮೇಲಿರುವ ಜನರ ನಂಬಿಕೆಯೇ ಈ ನಗರದ ನಿಜವಾದ ಸಂಪತ್ತು. ಯುದ್ಧ ಮತ್ತು ಹೋರಾಟಗಳಿಂದ ಬೆಳೆದ ನಗರಗಳಿದ್ದರೂ, ಮೈಸೂರು ಸಂಸ್ಕೃತಿಯ ಮೂಲಕ ಬೆಳೆದ ನಗರವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಈ ಬಾರಿಯ ಮೈಸೂರು ದಸರಾ ಮೆರವಣಿಗೆ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಮೈಸೂರು ಹೊಸ ಬ್ರ್ಯಾಂಡ್ನತ್ತ ಹೆಜ್ಜೆ ಇಡುತ್ತಿದೆ. ದಸರಾ ಮೆರವಣಿಗೆಯಲ್ಲಿ ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಸ್ತಬ್ಧಚಿತ್ರಗಳು ಕಂಗೊಳಿಸಲಿವೆ. ಈ ಮೂಲಕ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ದೇಶದ ಸೈನಿಕರ ಶೌರ್ಯವನ್ನು ಸಾರುವ ವಿಶಿಷ್ಟ ಮೆರವಣಿಗೆ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ಹರ್ಷ ವ್ಯಕ್ತಪಡಿಸಿದರು.