Search


ಮದುವೆಯಲ್ಲಿ ಊಟ ಮಾಡಿ, ವಧುವಿಗೆ 10 ರೂ ಉಡುಗೊರೆ ನೀಡಿದ ಮಾನಸಿಕ ಅಸ್ವಸ್ಥ ಯುವಕ..!

ಗುವಾಹಟಿ: ಮಾನಸಿಕ ಅಸ್ವಸ್ಥ ಯುವಕನೊಬ್ಬ, ಕರೆಯದ ಮದುವೆಗೆ ಹೋಗಿ, ಅಲ್ಲಿ ಊಟ ಮಾಡಿ ನಂತರ ವಧುವಿಗೆ 10 ರೂಪಾಯಿ ಉಡುಗೊರೆ ಕೊಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು. ಯುವಕನ ನಿಶ್ಕಲ್ಮಷ ಪ್ರೀತಿಗೆ ನೆಟ್ಟಿಗರು ಮನಸೋತಿದ್ದಾರೆ.

ಹೌದು... ಹಸಿವು ಎಂಬುದು ಮನುಷ್ಯನ ಕೈಯಲ್ಲಿ ಕಳ್ಳತನ ಮಾಡಿಸುತ್ತೆ, ಕರೆಯದ ಮದುವೆಗೆ ಕರೆದೊಯ್ಯುತ್ತೆ, ಆದರೆ ಈ ರೀತಿ ಕರೆಯದ ಮದುವೆಗೆ ಹೋದವರು, ಉಂಡು, ಯಾರಿಗೂ ಕಾಣದಂತೆ ಕೈ ತೊಳೆದುಕೊಂಡು ಹೊರಟು ಹೋಗಿರುತ್ತಾರೆ. ಆದರೆ ಅಸ್ಸಾಂನಲ್ಲಿ ನಡೆದ ಮದುವೆಯೊಂದರಲ್ಲಿ ಕರೆಯದೇ ಇದ್ದರೂ ಬಂದು ಊಟ ಮಾಡಿದ್ದ ಮಾನಸಿಕ ಅಸ್ವಸ್ಥನೊಬ್ಬ, ಹೋಗುವಾಗ ವಧುವಿಗೆ 10 ರೂ. ಉಡುಗೊರೆ ಕೊಟ್ಟು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಅಲ್ಲಿ ಸೇರಿದ್ದ ಅತಿಥಿಗಳೊಂದಿಗೆ ಅತ್ಯಂತ ಶಾಂತವಾಗಿ ಕುಳಿತು ಊಟ ಮಾಡಿದ್ದ ಯುವಕನ ಮುಗ್ಧತೆಯನ್ನು ಕಂಡು ಅಲ್ಲಿದ್ದ ಯಾರೊಬ್ಬರೂ ಆತನನ್ನು ಪ್ರಶ್ನಿಸಲಿಲ್ಲ ಅಥವಾ ಹೊರಗೆ ಹಾಕಲಿಲ್ಲ.ಆದರೆ, ಊಟ ಮುಗಿಸಿ ಅಲ್ಲಿಂದ ಹೊರಡುವ ಮುನ್ನ ಆ ವ್ಯಕ್ತಿ ಮಾಡಿದ ಕೆಲಸ ಎಲ್ಲರ ಹೃದಯ ಮುಟ್ಟುವಂತಿತ್ತು. ಆತ ತನ್ನ ಹರಿದ ಜೇಬಿನಿಂದ ಅತ್ಯಂತ ಜಾಗರೂಕತೆಯಿಂದ ಹತ್ತು ರೂಪಾಯಿಯ ಮುದ್ದೆಯಾಗಿದ್ದ ನೋಟನ್ನು ಹೊರಗೆ ತೆಗೆದು, ಅಲ್ಲಿಯೇ ಇದ್ದ ನವವಧುವಿನ ಕೈಯಲ್ಲಿ ಅತ್ಯಂತ ಪ್ರೀತಿಯಿಂದ ಉಡುಗೊರೆ ರೂಪದಲ್ಲಿ ಕೊಟ್ಟು ಹೋಗಿದ್ದಾರೆ.

ಅವರ ಈ ನಿಸ್ವಾರ್ಥ ನಡೆ ಮತ್ತು ಮುಗ್ಧ ಪ್ರೀತಿಯನ್ನು ಕಂಡು ವಧು ಸೇರಿದಂತೆ ಮದುವೆ ಮನೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣುಗಳು ಆನಂದಬಾಷ್ಪದಿಂದ ತುಂಬಿ ಬಂದವು. ಈ ಜಗತ್ತಿನಲ್ಲಿ ಮಾನವೀಯತೆ ಇನ್ನು ಸತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

By thebigbulletin.com - 28-05-2026


Ads in Post