ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರೆಂದು ಪರಿಗಣಿಸಲ್ಪಡುವ ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಘೋಷಿಸಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಅರ್ಜೆಂಟೀನಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಮೆಸ್ಸಿ, ಭಾವನಾತ್ಮಕ ಸಂದೇಶದ ಮೂಲಕ ತಮ್ಮ ಅಂತಾರಾಷ್ಟ್ರೀಯ ಪಯಣಕ್ಕೆ ತೆರೆ ಎಳೆದಿದ್ದಾರೆ.
2026ರ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಅರ್ಜೆಂಟೀನಾ ತಂಡ ಸ್ಪೇನ್ ವಿರುದ್ಧ ಸೋಲು ಕಂಡ ಕೆಲವು ತಿಂಗಳ ಬಳಿಕ ಮೆಸ್ಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೈಬರಹದ ಭಾವನಾತ್ಮಕ ಪತ್ರವನ್ನು ಹಂಚಿಕೊಂಡಿರುವ 39 ವರ್ಷದ ಮೆಸ್ಸಿ, ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗುತ್ತಿರುವುದಾಗಿ ತಿಳಿಸಿದ್ದಾರೆ.
2005ರಲ್ಲಿ ಅರ್ಜೆಂಟೀನಾ ಪರ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ್ದ ಮೆಸ್ಸಿ, ತಮ್ಮ ವೃತ್ತಿಜೀವನದಲ್ಲಿ ಆರು ವಿಶ್ವಕಪ್ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. 2022ರಲ್ಲಿ ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ ಗೆಲ್ಲುವ ಮೂಲಕ ಅರ್ಜೆಂಟೀನಾದ ಬಹುಕಾಲದ ಕನಸನ್ನು ನನಸು ಮಾಡಿದ್ದರು. ಬಳಿಕ 2026ರ ವಿಶ್ವಕಪ್ನಲ್ಲೂ ತಂಡವನ್ನು ಫೈನಲ್ವರೆಗೆ ಮುನ್ನಡೆಸಿದ್ದರು. ನಿವೃತ್ತಿ ಘೋಷಣೆಯಲ್ಲಿ ಮೆಸ್ಸಿ, “ಫೈನಲ್ ಪಂದ್ಯದ ಬಳಿಕ ಸಾಕಷ್ಟು ಯೋಚಿಸಿದ ನಂತರ ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಈ ನಿರ್ಧಾರ ನನಗೆ ತುಂಬಾ ನೋವುಂಟುಮಾಡುತ್ತಿದೆ. ಆದರೆ ವಿದಾಯ ಹೇಳಲು ಇದುವೇ ಸರಿಯಾದ ಸಮಯ ಎಂದು ಭಾವಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಮುಂದುವರಿದು, “ಈ ಜೆರ್ಸಿಗಾಗಿ ನಾನು ನನ್ನ ಸರ್ವಸ್ವವನ್ನೂ ನೀಡಿದ್ದೇನೆ. ಟ್ರೋಫಿಗಳನ್ನು ಗೆದ್ದ ಇತ್ತೀಚಿನ ವರ್ಷಗಳಲ್ಲಿ ಮಾತ್ರವಲ್ಲದೆ, ಅದಕ್ಕೂ ಮೊದಲಿನಿಂದಲೂ ದೇಶದ ಗೌರವಕ್ಕಾಗಿ ಮತ್ತು ಅಭಿಮಾನಿಗಳ ಮುಖದಲ್ಲಿ ಸಂತಸ ತರಲು ಹೋರಾಡಿದ್ದೇನೆ. ನನ್ನ ಸಾಮರ್ಥ್ಯದಲ್ಲಿದ್ದ ಎಲ್ಲವನ್ನೂ ತಂಡಕ್ಕಾಗಿ ನೀಡಿದ್ದೇನೆ. ಈಗ ಹೊಸ ಹಾಗೂ ಪ್ರತಿಭಾವಂತ ಯುವ ಆಟಗಾರರಿಗೆ ಅವಕಾಶ ನೀಡುವ ಸಮಯ ಬಂದಿದೆ” ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ಮೆಸ್ಸಿ, ಕಳೆದ 20 ವರ್ಷಗಳಿಂದ ತಮಗೆ ನೀಡಿದ ಅಪಾರ ಪ್ರೀತಿ ಮತ್ತು ಬೆಂಬಲವನ್ನು ಸ್ಮರಿಸಿದ್ದಾರೆ. ಇನ್ನು ಮುಂದೆ ತಾವು ಕೂಡ ಸಾಮಾನ್ಯ ಅಭಿಮಾನಿಯಂತೆ ಅರ್ಜೆಂಟೀನಾ ತಂಡವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
“ಒಳ್ಳೆಯ ದಿನಗಳಲ್ಲಿ ಮಾತ್ರವಲ್ಲ, ಕಷ್ಟದ ಸಂದರ್ಭಗಳಲ್ಲೂ ನಾನು ಅರ್ಜೆಂಟೀನಾ ತಂಡದೊಂದಿಗೆ ಇರುತ್ತೇನೆ. ನನ್ನ ಕುಟುಂಬ, ತರಬೇತುದಾರರು, ಸಹ ಆಟಗಾರರು, ಅಧಿಕಾರಿಗಳು ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನನ್ನು ಅರ್ಜೆಂಟೀನಿಯನ್ ಆಗಿ ಹುಟ್ಟಿಸಿದ ದೇವರಿಗೆ ಕೋಟಿ ನಮನಗಳು” ಎಂದು ಮೆಸ್ಸಿ ಭಾವುಕರಾಗಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳಿದ್ದರೂ, ಮೆಸ್ಸಿ ಕ್ಲಬ್ ಫುಟ್ಬಾಲ್ನಲ್ಲಿ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ. ಅಮೆರಿಕದ ಇಂಟರ್ ಮಿಯಾಮಿ ಕ್ಲಬ್ನೊಂದಿಗೆ 2028ರವರೆಗೆ ಒಪ್ಪಂದ ಹೊಂದಿರುವ ಅವರು, ಮುಂದಿನ ದಿನಗಳಲ್ಲಿ ಕ್ಲಬ್ ಪರವಾಗಿ ಕಣಕ್ಕಿಳಿಯಲಿದ್ದಾರೆ.