Search


ಕೊಲ್ಕತ್ತಾದಲ್ಲಿದ್ದ ಮೆಸ್ಸಿ ಪ್ರತಿಮೆ ತೆರವುಗೊಳಿಸಲು ಆದೇಶ; ಕಳಪೆ ಕಾಮಗಾರಿ ಆರೋಪ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಲಿಯೊನೆಲ್ ಮೆಸ್ಸಿಯ ‘GOAT’ ಪ್ರವಾಸದ ಅಂಗವಾಗಿ ಕಳೆದ ಡಿಸೆಂಬರ್‌ನಲ್ಲಿ ಸ್ಥಾಪಿಸಲಾದ ಭಾರೀ ಪ್ರತಿಮೆ ಬೀಳುವ ಸ್ಥಿತಿಯಲ್ಲಿದ್ದು. ಮಳೆ ಗಾಳಿಯ ರಭಸಕ್ಕೆ ಪ್ರತಿಮೆ ಅಲುಗಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ.

ಸ್ಥಳೀಯ ನಿವಾಸಿಗಳ ದೂರುಗಳ ಹಿನ್ನೆಲೆ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಇಂಜಿನಿಯರ್‌ಗಳು ಸೋಮವಾರ ಪ್ರತಿಮೆಯ ತಾಂತ್ರಿಕ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಪ್ರತಿಮೆಯ ಬಲಿಷ್ಠತೆ ಗಂಭೀರವಾಗಿ ಹಾನಿಗೊಳಗಾಗಿದೆ ಎಂಬುದು ಬೆಳಕಿಗೆ ಬಂದಿದ್ದು, ತಕ್ಷಣವೇ ಅದನ್ನು ತೆರವುಗೊಳಿಸಿ ಬೇರೆಡೆ ಸ್ಥಳಾಂತರಿಸಲು ಆದೇಶಿಸಲಾಗಿದೆ. ಇನ್ನು ಈ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳದ ಶಾಸಕ ಶಾರದ್ವತ್ ಮುಖರ್ಜಿ “ಅರ್ಜೆಂಟಿನಾ ಫುಟ್‌ಬಾಲ್ ದಂತಕಥೆಯ ಈ ಪ್ರತಿಮೆ ಸುರಕ್ಷಿತವಾಗಿಲ್ಲ ಎಂದು ಕಂಡುಬಂದಿದೆ. ಗಾಳಿಗೆ ಪ್ರತಿಮೆ ತೂಗುತ್ತಿರುವುದು ಗಮನಕ್ಕೆ ಬಂದಿದೆ,” ಎಂದು ತಿಳಿಸಿದ್ದಾರೆ.

ಇನ್ನು ಪ್ರತಿಮೆಯೂ ಹೆಚ್ಚು ಜನಸಂದಣಿ ಇರುವ ರಸ್ತೆಯ ಪಕ್ಕದಲ್ಲಿದ್ದು ಅದನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿದೆ. ಆದರೂ ಶೀಘ್ರದಲ್ಲೇ ಅದನ್ನು ತೆರವುಗೊಳಿಸುವ ಯೋಜನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಫೈಬರ್‌ಗ್ಲಾಸ್ ಮತ್ತು ಕಬ್ಬಿಣದಿಂದ ನಿರ್ಮಿಸಲಾದ ಈ ಪ್ರತಿಮೆಯನ್ನು ಭಾರವಾದ ನೈಲಾನ್ ಕಡ್ಡಿಗಳಿಂದ ತಾತ್ಕಾಲಿಕವಾಗಿ ಬಿಗಿಗೊಳಿಸಲಾಗಿದೆ. ಜನರು ಮತ್ತು ವಾಹನ ಸಂಚಾರವನ್ನು ಸುರಕ್ಷಿತವಾಗಿಡಲು ಸ್ಥಳದ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಫುಟ್‌ಬಾಲ್ ಲೋಕದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಲಿಯೊನೆಲ್ ಮೆಸ್ಸಿ, ಕಳೆದ ಡಿಸೆಂಬರ್‌ನಲ್ಲಿ ವರ್ಚುವಲ್ ಮೂಲಕ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ವಿಡಿಯೋ ಪರದೆಯ ಮೂಲಕ ರಿಮೋಟ್ ಕಂಟ್ರೋಲ್‌ನ ಬಟನ್ ಒತ್ತುವ ಮೂಲಕ ಉದ್ಘಾಟನೆ ನೆರವೇರಿಸಿದ್ದರು. ಆದರೆ ಕೊಲ್ಕತ್ತಾ ಪ್ರವಾಸದ ವೇಳೆ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಹಿಂಸಾಚಾರದಿಂದ ಆ ಕಾರ್ಯಕ್ರಮ ವಿವಾದಕ್ಕೆ ಗುರಿಯಾಗಿತ್ತು.

By Ravikumar - 29-05-2026


Ads in Post