Search


ನಾಗೇಂದ್ರ ಅಪರಾಧಿ; ಸಂಪುಟ ಸಹದ್ಯೋಗಿ ವಿರುದ್ಧ ಹೀಗ್ಯಾಕೆ ಹೇಳಿದ್ರು ಶಿವಲಿಂಗೇಗೌಡ್ರು

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿ, ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ.

ಇದರ ವಿರುದ್ಧ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು ಶಿವಲಿಂಗೇಗೌಡರನ್ನು ಮಾತನಾಡಿಸಿ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಾಗೇಂದ್ರ ಅವರಿಂದ ರಾಜೀನಾಮೆ ಏಕೆ ಪಡೆಯಲಾಯಿತು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾಗೇಂದ್ರ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸದನದಲ್ಲಿ ಚರ್ಚೆ ನಡೆದಿತ್ತು. ಆದರೆ ಆ ಸಂದರ್ಭದಲ್ಲಿ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಿರಲಿಲ್ಲ ಎಂದು ಹೇಳಿದರು.

ಮತ್ತೆ ಪ್ರಶ್ನಿಸಿದ ವರದಿಗಾರರು, ಸತ್ಯಾಸತ್ಯತೆ ತಿಳಿಯದೇ ನಾಗೇಂದ್ರ ಅವರ ರಾಜೀನಾಮೆ ಪಡೆದು ಅವರನ್ನು ಬಲಿಪಶು ಮಾಡಲಾಯಿತೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಶಿವಲಿಂಗೇಗೌಡ, ನಾಗೇಂದ್ರ ಮೇಲ್ನೋಟಕ್ಕೆ ಅಪರಾಧಿ ಎಂಬ ಶಂಕೆ ಇದ್ದಿದ್ದರಿಂದ ರಾಜೀನಾಮೆ ಪಡೆಯಲಾಗಿತ್ತು ಎಂದು ಹೇಳಿದರು. ಸಚಿವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಚರ್ಚೆಗೆ ಕಾರಣವಾಯಿತು. ಹೇಳಿಕೆಯ ಸಂದರ್ಭದಲ್ಲಿ ನಾಗೇಂದ್ರ ಅವರನ್ನು ನೇರವಾಗಿ ‘ಅಪರಾಧಿ’ ಎಂದು ಬಿಂಬಿಸುವ ರೀತಿಯಲ್ಲಿ ಸಚಿವರು ಮಾತನಾಡಿದ್ದಾರೆ ಎಂಬ ಟೀಕೆಗಳು ವ್ಯಕ್ತವಾದವು.

ಈ ವೇಳೆ ಸಚಿವರ ಪಕ್ಕದಲ್ಲಿದ್ದ ಶಾಸಕರು ಹೇಳಿಕೆಯನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ಬಳಿಕ ಶಿವಲಿಂಗೇಗೌಡ ಅವರು, ನಾಗೇಂದ್ರ ಅವರು ಆರೋಪಿ ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ರಾಜೀನಾಮೆ ಪಡೆಯಲಾಗಿತ್ತು ಎಂದು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದರು. ಸಚಿವರ ಈ ಹೇಳಿಕೆ ಇದೀಗ ಬಿಜೆಪಿ ಕೈಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

By Ravikumar - 22-08-2026


Ads in Post